ರಾಯಚೂರು:ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ಅಭಿಮಾನಿಗಳು ಘೋಷಣೆ ಕೂಗಿದ ಪ್ರಸಂಗ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ದೇವದುರ್ಗ ತಾಲೂಕಿನ ಗಬ್ಬೂರು ಗ್ರಾಮದಲ್ಲಿ ಆಯೋಜಿಸಿದ್ದ 75 ಜೋಡಿಗಳ ಸಾಮೂಹಿಕ ವಿವಾಹದ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಸಾಮೂಹಿಕ ವಿವಾಹ ಉದ್ದೇಶಿಸಿ ಅವರು ಮಾತನಾಡುತ್ತಿದ್ದಾಗ ವೇದಿಕೆ ಬಳಿ ಮುಂದಿನ ಸಿಎಂ ಸಿದ್ದರಾಮಯ್ಯ ಅಂತ ಅಭಿಮಾನಿಗಳು ಘೋಷಣೆ ಕೂಗಿದರು.
ಮದುವೆ ಕಾರ್ಯಕ್ರಮ ಜಾತ್ರೆ ಮಾದರಿಯಲ್ಲಿ ನಡೆದಿದೆ ಎಂದ ಅವರು, ನವ ವರ-ವಧುಗಳಿಗೆ ಶುಭ ಕೋರಿದರು. ಇತ್ತೀಚಿನ ದಿನಗಳಲ್ಲಿ ಮದುವೆ ವೆಚ್ಚಗಳೆಲ್ಲ ದುಬಾರಿ ಆಗಿವೆ. ಹಳ್ಳಿಯಲ್ಲಿ ಒಂದು ಮಾತು ಇತ್ತು. ಮದುವೆ ಮಾಡಿ ನೋಡು, ಮನೆ ಕಟ್ಟಿನೋಡು ಎಂದು. ಮದುವೆ ಮಾಡಿದ್ರೆ ಸಾಲಗಾರ ಆಗುತ್ತಾರೆ ಎಂಬ ಮಾತು ಇದೆ. ಮದುವೆ ಮಾಡುವುದು ಈಗಿನ ಕಾಲದಲ್ಲಿ ಸುಲಭದ ಕೆಲಸವಲ್ಲ. ಮದುವೆಯಲ್ಲಿ ಶ್ರೀಮಂತರು ಸಂಪತ್ತು ಪ್ರದರ್ಶನ ಮಾಡುತ್ತಾರೆ.
ಬಡವರು ಶ್ರೀಮಂತರಂತೆ ಮದುವೆ ಮಾಡಬಾರದು. ಸರಳವಾಗಿ ಮದುವೆ ಮಾಡಿದ್ರೂ ಗಂಡ-ಹೆಂಡತಿ ಆಗುತ್ತಾರೆ. ಸಾಲ ಮಾಡಿ ಮದುವೆ ಮಾಡಬಾರದು. ಮದುವೆ ಮಾಡಿ ಬಡವರು ಆಗಬಾರದು ಎಂದು ಸಾಮಾಜಿಕ ವ್ಯವಸ್ಥೆ ಬಗ್ಗೆ ವೇದಿಕೆಯಲ್ಲಿ ಮಾತನಾಡಿದರು. ಸಂವಿಧಾನ ಬಂದ ಮೇಲೆ ಜಾತಿ ಮತ್ತು ವರ್ಗಗಳು ಇಲ್ಲ. ಜಾತಿ ವ್ಯವಸ್ಥೆ ಮನುಷ್ಯ ಹುಟ್ಟು ಹಾಕಿದ್ದು, ದೇವರು ಅಲ್ಲ ಎಂದರು.