ರಾಯಚೂರು : ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಘೋಷಿಸಿರುವ ಗ್ಯಾರಂಟಿ ಕಾರ್ಡ್ ಎಕ್ಸ್ಪೈರಿ ಆಗಿದೆ ಎಂಬ ಬಿಜೆಪಿ ನಾಯಕರ ಹೇಳಿಕೆಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದು, ಬಿಜೆಪಿಯವರ ವಾರಂಟಿಯೇ ಮುಗಿದಿದೆ ಎಂದು ತಿರುಗೇಟು ನೀಡಿದ್ದಾರೆ.
ಜಿಲ್ಲೆಯ ಮಾನವಿ ಪಟ್ಟಣಕ್ಕೆ ಕಾಂಗ್ರೆಸ್ ಅಭ್ಯರ್ಥಿ ಜಿ.ಹಂಪಯ್ಯ ನಾಯಕ ಪರವಾಗಿ ಪ್ರಚಾರಕ್ಕೆ ಆಗಮಿಸಿದ ವೇಳೆ ಹೆಲಿಪ್ಯಾಡ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಕಳೆದ ಬಾರಿ ಚುನಾವಣೆಯಲ್ಲಿ 600 ಭರವಸೆಗಳನ್ನು ನೀಡಿದ್ದರು. ಇದರಲ್ಲಿ ಇವರು ಎಷ್ಟು ಈಡೇರಿಸಿದ್ದಾರೆ?. ಕೇವಲ 50 ಭರವಸೆಗಳನ್ನು ಮಾತ್ರ ಈಡೇರಿಸಿದ್ದಾರೆ. ಶೇ.10ರಷ್ಟು ಆಶ್ವಾಸನೆಗಳನ್ನು ಬಿಜೆಪಿಯವರು ಈಡೇರಿಸಿಲ್ಲ. ಬಿಜೆಪಿಯವರ ವಾರಂಟಿಯೇ ಮುಗಿದಿದೆ ಎಂದು ವಾಗ್ದಾಳಿ ನಡೆಸಿದರು.
ಇದೇ ವೇಳೆ ನಾನು ಮುಖ್ಯಮಂತ್ರಿಯಾಗಿರುವಾಗ ಯಾರಾದರೂ 40 ಪರ್ಸೆಂಟ್ ಸರ್ಕಾರ ಎಂದು ಹೇಳಿದ್ರಾ?. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರ ಮತ್ತು ಬಿಜೆಪಿ ಸರ್ಕಾರಕ್ಕೆ ಅಲ್ವಾ 40 ಪರ್ಸೆಂಟ್ ಸರ್ಕಾರ ಅಂತಾ ಹೇಳುತ್ತಿರುವುದು ಎಂದು ಟೀಕಿಸಿದರು.
ಇದನ್ನು ಓದಿ:ಡಿಕೆ ಶಿವಕುಮಾರ ರಕ್ತ ಯಾರ ಉಪಯೋಗಕ್ಕೂ ಬರಲ್ಲ: ಸಿಎಂ ಬೊಮ್ಮಾಯಿ ಟಾಂಗ್
ಪ್ರಧಾನಿ ಮೋದಿಯವರು ಹೊರದೇಶಗಳಿಂದ ಕಪ್ಪು ಹಣ ತರುವುದಾಗಿ ಹೇಳಿದ್ದರು. ಕಪ್ಪು ಹಣ ತಂದ್ರಾ. ಎರಡು ಕೋಟಿ ಉದ್ಯೋಗ ಕೊಟ್ರಾ, ಡಬಲ್ ಇಂಜಿನ್ ಸರ್ಕಾರ ಏನು ಮಾಡಿದೆ ಎಂದು ಪ್ರಶ್ನಿಸಿದರು. ರಾಜ್ಯದಲ್ಲಿ ಬರಗಾಲ, ಪ್ರವಾಹ ಬಂದಾಗ ಮೋದಿ ಬರಲಿಲ್ಲ. ಇವಾಗ ಬಂದು ಬರಿ ಸುಳ್ಳು ಹೇಳುತ್ತಿದ್ದಾರೆ. ಸುಳ್ಳು ಹೇಳುವವರು ನರೇಂದ್ರ ಮೋದಿಯವರು. ನಾವಲ್ಲ ಎಂದು ಟೀಕಿಸಿದರು. ವರುಣಾ ಕ್ಷೇತ್ರದಲ್ಲಿ ಸಿದ್ದು ಸೊಸೆ ಚುನಾವಣೆ ಪ್ರಚಾರ ವಿಚಾರಕ್ಕೆ ಪ್ರತಿಕ್ರಿಯಿಸಿ, ಯಾಕೆ ಪ್ರಚಾರ ಮಾಡಬಾರದು. ನಮ್ಮ ಪರವಾಗಿ ಪ್ರಚಾರ ಮಾಡಿದ್ರೆ ಏನ್ ತಪ್ಪು ಎಂದು ಮರು ಪ್ರಶ್ನೆ ಹಾಕಿದರು.