ರಾಯಚೂರು:ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಕಾರಣ ಮಿಸ್ಟರ್ ಕುಮಾರಸ್ವಾಮಿ. 2006ರಲ್ಲಿ ಬಿಜೆಪಿ ಜೊತೆ ಸೇರಿಕೊಂಡು ಸರ್ಕಾರ ಮಾಡಿದ್ದು ಯಾರು?. ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಸುಳ್ಳು ಹೇಳುತ್ತಿದ್ದಾರೆ. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಜೊತೆಗೆ ಸೇರಿ ಸರ್ಕಾರ ಮಾಡಿದ್ದು ಯಾರು?, ಕಾಂಗ್ರೆಸ್ ಬಿಜೆಪಿ ಬಿ ಟೀಮ್ ಎಂದು ಪ್ರಚಾರ ಮಾಡುವುದು ಕುಮಾರಸ್ವಾಮಿಗೆ ನಾಚಿಕೆ ಆಗಬೇಕು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ರಾಯಚೂರು ಜಿಲ್ಲೆಯ ಸಿಂಧನೂರು ಪಟ್ಟಣದಲ್ಲಿ ಮಾಜಿ ಶಾಸಕ ಹಂಪನಗೌಡ ಪುತ್ರನ ವಿವಾಹ ಸಮಾರಂಭದಲ್ಲಿ ಭಾಗವಹಿಸಲು ಆಗಮಿಸಿದ್ದ ವೇಳೆ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು. ರಾಯಚೂರು ಜಿಲ್ಲೆಯಲ್ಲಿ ಏಳು ವಿಧಾನಸಭಾ ಕ್ಷೇತ್ರಗಳ ಪೈಕಿ ಒಂದು ಸ್ಥಾನ ಸಹ ಬಿಜೆಪಿ ಗೆಲುವು ಸಾಧಿಸುವುದಿಲ್ಲ. ಕಾಂಗ್ರೆಸ್ನ ಅಭ್ಯರ್ಥಿಗಳು ಎಲ್ಲಾ ಕ್ಷೇತ್ರದಲ್ಲಿ ಗೆಲ್ಲುತ್ತಾರೆ. ಅದಕ್ಕೆ ಬಿಜೆಪಿಯವರು ಸುಳ್ಳು ಹೇಳಿಕೊಂಡು ಓಡಾಟ ಶುರು ಮಾಡಿದ್ದಾರೆ. ಈ ಬಾರಿ ಬಿಜೆಪಿ ರಾಜ್ಯದಲ್ಲಿ 50-60ಸ್ಥಾನ ಗೆದ್ದರೆ ಅದೇ ಹೆಚ್ಚು ಎಂದು ಭವಿಷ್ಯ ನುಡಿದರು.
ಕಾಂಗ್ರೆಸ್ ಟಿಕೆಟ್ ಗೊಂದಲ ವಿಚಾರಕ್ಕೆ ಸಮಬಂಧಿಸಿದಂತೆ ಪ್ರತಿಕ್ರಿಯಿಸಿ, ಗೆಲ್ಲುವ ಅಭ್ಯರ್ಥಿಗಳಿಗೆ ಟಿಕೆಟ್ ನೀಡುತ್ತೇವೆ. 15 ದಿನಗಳಲ್ಲಿ ಎಲ್ಲಾ ಗೊಂದಲಕ್ಕೆ ತೆರೆ ಎಳೆಯುತ್ತೇವೆ. ಅರಸಿಕೇರೆಯ ಜೆಡಿಎಸ್ ಶಾಸಕ ಶಿವಲಿಂಗೇಗೌಡರು ಕಾಂಗ್ರೆಸ್ ಸೇರ್ಪಡೆಯಾಗುತ್ತಾರೆ. ಶಿವಲಿಂಗೇಗೌಡರು 100ಕ್ಕೆ ನೂರರಷ್ಟು ಗೆದ್ದು ಬರುತ್ತಾರೆ. ನಿಮಗೆ ಅನುಮಾನ ಬೇಡ. ಈ ಅಧಿವೇಶನ ಮುಗಿದ ಬಳಿಕ ಯಾವಾಗದರೂ ಅವರು ಕಾಂಗ್ರೆಸ್ಗೆ ಬರಬಹುದು ಎಂದು ಸಿದ್ದರಾಮಯ್ಯ ಹೇಳಿದರು.
ಮಾಜಿ ಸಚಿವ ಜನಾರ್ದನ ರೆಡ್ಡಿ ಹೊಸ ಪಕ್ಷ ಸ್ಥಾಪನೆ ವಿಚಾರ ಕುರಿತು ಮಾತನಾಡಿ, ಕರ್ನಾಟಕದಲ್ಲಿ ಬಹಳ ಜನರು ಹೊಸ ಪಕ್ಷ ಕಟ್ಟಿದ್ದಾರೆ, ಅಭ್ಯರ್ಥಿಗಳನ್ನು ಹಾಕಿದ್ದಾರೆ, ಹೊಸ ಪಕ್ಷ ಕಟ್ಟಿದವರು ಯಾರೂ ಇಲ್ಲಿ ಉಳಿದಿಲ್ಲ, ಪಾಪ ಜನಾರ್ದನ ರೆಡ್ಡಿ ಅವರು ದುಡ್ಡು ಇದೆ ಅಂತ ಹೊಸ ಪಕ್ಷ ಕಟ್ಟಿದ್ದಾರೆ, ಅವರ ಪಕ್ಷಕ್ಕೆ ನನ್ನದೇನು ತಕರಾರು ಇಲ್ಲ ಎಂದರು.