ರಾಯಚೂರು : ಕಲಿಯುಗದ ಕಾಮಧೇನು, ಭಕ್ತರ ಕಲ್ಪವೃಕ್ಷ ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಮಹಾರಥೋತ್ಸವ ಅದ್ಧೂರಿಯಾಗಿ ನೆರವೇರಿತು. ಶ್ರೀರಾಘವೇಂದ್ರ ಸ್ವಾಮಿಗಳ 352ನೇ ಆರಾಧನಾ ಮಹೋತ್ಸವದ ಹಿನ್ನೆಲೆ ರಾಯರ ಉತ್ತಾರಾಧನೆ ಮಹೋತ್ಸವ ವೈಭವದಿಂದ ಜರುಗಿತು. ಮಹಾರಥೋತ್ಸವವು ನಾನಾ ವಾದ್ಯಗಳ ಮೇಳಗಳೊಂದಿಗೆ ನಡೆಯಿತು. ವಿವಿಧ ಸಾಂಸ್ಕೃತಿಕ ಕಲಾ ತಂಡಗಳು ಉತ್ಸವದಲ್ಲಿ ಭಾಗಿಯಾಗಿದ್ದವು. ಸಾವಿರಾರು ಭಕ್ತರು ರಥೋತ್ಸವವನ್ನು ಕಣ್ತುಂಬಿಕೊಂಡರು.
ಬೆಳಗ್ಗೆ ರಾಯರ ಮೂಲ ಬೃಂದಾವನಕ್ಕೆ ವಿಶೇಷ ಪೂಜೆ ಕೈಂಕರ್ಯಗಳು ನಡೆದವು. ನಂತರ ಪಲ್ಲಕ್ಕಿಯಲ್ಲಿ ಪ್ರಹ್ಲಾದ್ ರಾಜರ ಉತ್ಸವ ಮೂರ್ತಿ ಗುರುಸಾರ್ವಭೌಮ ವಿದ್ಯಾಪೀಠಕ್ಕೆ ತೆರಳಿತು. ಅಲ್ಲಿ ಪೂಜೆ ನೆರವೇರಿದ ಬಳಿಕ ಪುನಃ ರಾಯರ ಮೂಲ ಬೃಂದಾವನ ಉತ್ಸವ ಮೂರ್ತಿ ಆಗಮಿಸಿತು. ಬಳಿಕ ಬೃಂದಾವನದಲ್ಲಿ ವಸಂತೋತ್ಸವವನ್ನು ಆಚರಿಸಲಾಯಿತು. ಈ ವೇಳೆ ಗುಲಾಲನ್ನು ರಾಯರ ಮೂಲಬೃಂದಾವನಕ್ಕೆ ಸಮರ್ಪಿಸಲಾಯಿತು. ನಂತರ ಪೀಠಾಧಿಪತಿ ಶ್ರೀಸುಬುಧೇಂದ್ರ ತೀರ್ಥರು ಭಕ್ತರಿಗೆ ಗುಲಾಲ್ ಎರಚಿದರು.