ರಾಯಚೂರು:ದೇವದುರ್ಗ ಪಟ್ಟಣದಲ್ಲಿ ಸಂಚಾರ ದಟ್ಟಣೆ ನಿಯಂತ್ರಿಸಲು ಬೈಪಾಸ್ ರಸ್ತೆ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ರಾಜ್ಯ ರಸ್ತೆ ಅಭಿವೃದ್ದಿ ನಿಗಮದ ಅಧ್ಯಕ್ಷ ಕೆ. ಶಿವನಗೌಡ ನಾಯಕ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಅಧಿಕಾರಿಗಳೊಂದಿಗೆ ಸಭೆಯಲ್ಲಿ ಮಾತನಾಡಿದ ಅವರು, ದೇವದುರ್ಗ ಪಟ್ಟಣದಲ್ಲಿ ಸಂಚಾರ ದಟ್ಟಣೆಯನ್ನು ಹತೋಟಿಗೆ ತರಬೇಕಾಗಿದೆ. ಹೀಗಾಗಿ ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವಂತಹ ಬೈಪಾಸ್ ಹಾಗೂ ಚತುಷ್ಪಥ ರಸ್ತೆಯ ನಿರ್ಮಾಣ ಅಂದಾಜು ಪಟ್ಟಿ ಸಿದ್ದಪಡಿಸಿ, ಒಂದು ಪ್ಯಾಕೇಜ್ ನಡಿಯಲ್ಲಿ 100 ಕೋಟಿ ರೂಪಾಯಿ ಪ್ರಸ್ತಾವನೆಯನ್ನು ನಿಗಮಕ್ಕೆ ಸಲ್ಲಿಸಿದರೆ, ಅದನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರುವ ಮೂಲಕ ಯೋಜನೆ ಜಾರಿಗೆ ತರಿಸುವಂಥ ಕಾರ್ಯ ಮಾಡುವುದಾಗಿ ತಿಳಿಸಿದರು.
ರಾಯಚೂರು, ಅರಕೇರಾ, ಸಿರವಾರದಿಂದ ಬರುವವರು ಶಹಾಪುರ ಹಾಗೂ ಲಿಂಗಸುಗೂರುಗೆ ತೆರಳಲು ಬೈಪಾಸ್ ರಸ್ತೆ ಅಗತ್ಯವಿದೆ. ಇದರಿಂದ ಸಂಚಾರ ದಟ್ಟಣೆ ಹಾಗೂ ಅಪಘಾತ ತಡೆಯಬಹುದು. ಬೈಪಾಸ್ ರಸ್ತೆ ನಿರ್ಮಾಣಕ್ಕೆ ಭೂಸ್ವಾಧೀನಕ್ಕೆ ಯಾವುದೇ ತೊಂದರೆಯಿಲ್ಲ. ನಾಲ್ಕು ನಗರಗಳಿಗೆ ಸಂಪರ್ಕ ಕಲ್ಪಿಸುವ ಚತುಷ್ಪಥ ರಸ್ತೆಯೊಂದಿಗೆ ಬೈಪಾಸ್ ರಸ್ತೆ ನಿರ್ಮಾಣಕ್ಕೆ ಒಂದೇ ಪ್ಯಾಕೇಜಿನಡಿ 100 ಕೋಟಿ ರೂ. ವೆಚ್ಚದ ಪ್ರಸ್ತಾವನೆ ಸಲ್ಲಿಸಿ. ಸಕ್ಯೂರ್ಟ್ ಹೌಸ್ ನಿಂದ ಸರ್ಕಾರಿ ಡಿಗ್ರಿ ಕಾಲೇಜು ಮಾರ್ಗವಾಗಿ ಶಹಾಪುರಗೆ ಸಂಪರ್ಕಿಸಲು 4 ಕಿ.ಮೀ ಆಗಲಿದೆ. ದೇವದುರ್ಗ ಸುತ್ತುವರಿದು ಶಂಭುಲಿಂಗೇಶ್ವರ ಬೆಟ್ಟ, ಕೋತಿಗುಡ್ಡದ ಮೂಲಕ ಬೈಪಾಸ್ ರಸ್ತೆಗೆ 7 ಕಿ.ಮೀ ಆಗಲಿದೆ. ಈ ಬಗ್ಗೆ ಪರಿಶೀಲನೆ ನಡೆಸಿ ನಿಗಮಕ್ಕೆ ವರದಿ ಸಲ್ಲಿಸುವಂತೆ ಸೂಚಿಸಿದರು.
ವಂದಲಿ, ಊಟಿ, ಭೂಮನಗುಂಡ ಮಾರ್ಗವಾಗಿ ಹಟ್ಟಿಗೆ ಸಂಪರ್ಕಿಸುವ ರಸ್ತೆ ಅಭಿವೃದ್ಧಿಗೂ ಪ್ರಸ್ತಾವನೆ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಈ ಬಗ್ಗೆ ಸಂಸದರೊಂದಿಗೆ ಮಾತುಕತೆ ನಡೆಸಿ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಿಂದ ಅನುದಾನ ನೀಡಲು ಮನವಿ ಮಾಡುವುದಾಗಿ ತಿಳಿಸಿದರು.
ಸಭೆಯಲ್ಲಿ ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ ಉಸ್ತುವಾರಿ ಇಂಜಿನಿಯರ್ ರವೀಂದ್ರ, ಈರಣ್ಣ, ಲೋಕೋಪಯೋಗಿ ಇಲಾಖೆ ಇಇ ಚನ್ನಬಸಪ್ಪ ಮ್ಯಾಕಲ್ ಇನ್ನಿತರ ಅಧಿಕಾರಿಗಳು ಇದ್ದರು.