ರಾಯಚೂರು : ಬೀದಿ ನಾಯಿಗಳ ದಾಳಿಯಿಂದಾಗಿ 20ಕ್ಕೂ ಹೆಚ್ಚು ಕುರಿ ಹಾಗೂ ಮರಿಗಳು ಸಾವಿಗೀಡಾಗಿವೆ ಎನ್ನುವ ಆಪಾದನೆ ರಾಯಚೂರು ತಾಲೂಕಿನ ಹನುಮನದೊಡ್ಡಿ ಗ್ರಾಮಸ್ಥರಿಂದ ಕೇಳಿ ಬಂದಿದೆ. ಹನುಮನದೊಡ್ಡಿ ಹೊರವಲಯದ ತಾಯಪ್ಪ ಎನ್ನುವವರ ಹೊಲದಲ್ಲಿ 20ಕ್ಕೂ ಹೆಚ್ಚು ಕುರಿಗಳನ್ನು ಬಲೆಗೆ ಹಾಕಲಾಗಿತ್ತು. ಇದನ್ನು ನೋಡಿದ ಮೂರ್ನಾಲ್ಕು ಬೀದಿ ನಾಯಿಗಳು ಬಲೆಯೊಳಗೆ ನುಗ್ಗಿ ಕುರಿಗಳು ಹಾಗೂ ಮರಿಗಳ ರಕ್ತವನ್ನು ಹೀರಿ, ತಿಂದು ಹಾಕಿವೆ ಎನ್ನಲಾಗುತ್ತಿದೆ.
ಕುರಿಗಾಯಿ ಸೊಗಪ್ಪ ಎನ್ನುವವರಿಗೆ ಸೇರಿದ ಕುರಿಗಳು ಹಾಗೂ ಮರಿಗಳು ಎಂದು ತಿಳಿದು ಬಂದಿದ್ದು, ಘಟನೆಯಿಂದಾಗಿ ಕುರಿಗಾಹಿ ಲಕ್ಷಾಂತರ ರೂಪಾಯಿ ನಷ್ಟ ಹೊಂದಿದ್ದಾರೆ. ಕುರಿಗಳನ್ನ ಸಾಕಣೆ ಮಾಡಿಕೊಂಡು, ರೈತರ ಹೊಲದಲ್ಲಿ ಕುರಿಗಳನ್ನು ಕಟ್ಟಿ ಅದರ ಗೊಬ್ಬರವನ್ನು ಅಲ್ಲಿಯೇ ಹೊಲದಲ್ಲಿ ಹಾಕುವುದು ಹಾಗೂ ಅವುಗಳ ಮಾರಾಟದಿಂದ ಬರುವ ಆದಾಯದಿಂದ ಸೂಗಪ್ಪನ ಜೀವನ ನಡೆಸಲಾಗುತ್ತಿತ್ತು. ಆದರೆ ಬೀದಿ ನಾಯಿಗಳ ದಾಳಿಯಿಂದಾಗಿ ಲಕ್ಷಾಂತರ ರೂಪಾಯಿ ನಷ್ಟ ಹೊಂದಿ ದಿಕ್ಕು ತೋಚದಂತಾಗಿದೆ. ಸಂಬಂಧಿಸಿದ ಇಲಾಖೆಯವರು ಸ್ಪಂದಿಸಿ, ನಷ್ಟ ಪರಿಹಾರವನ್ನು ನೀಡಬೇಕೆಂದು ಕುರಿಗಾಯಿ ಸಂಬಂಧಿ ಸುರೇಶ ಒತ್ತಾಯಿಸಿದ್ದಾರೆ.
ಬೀದಿ ನಾಯಿಗಳನ್ನು ಸೆರೆ ಹಿಡಿಯುವಂತೆ ಮನವಿ: ಗ್ರಾಮದಲ್ಲಿ ಮೂರ್ನಾಲ್ಕು ಬೀದಿ ನಾಯಿಗಳು ಇವೆ. ಈ ನಾಯಿಗಳು ಆಗಾಗ ಗ್ರಾಮದಲ್ಲಿ ಕುರಿಗಳ ಮೇಲೆ ದಾಳಿ ನಡೆಸುತ್ತಿವೆ. ಇದರಿಂದ ಕುರಿಗಳಿಗೆ ನಷ್ಟವಾಗುತ್ತಿದ್ದು, ಸಂಬಂಧಿಸಿದ ಸ್ಥಳೀಯರಿಗೆ ಬೀದಿ ನಾಯಿಗಳನ್ನು ಸೆರೆ ಹಿಡಿಯುವಂತೆ ಮನವಿ ಸಲ್ಲಿಸಲಾಗಿದೆ. ಆದರೆ, ಕ್ರಮ ಕೈಗೊಂಡಿಲ್ಲ ಎನ್ನುವ ಮಾತು ಗ್ರಾಮಸ್ಥರಿಂದ ಕೇಳಿ ಬಂದಿದೆ.
ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಬೀದಿ ನಾಯಿಗಳ ದಾಳಿ ತಪ್ಪಿಸಲು ಅಗತ್ಯ ಕ್ರಮ ಕೈಗೊಂಡು, ಈಗ ಕುರಿಗಳು ಮತ್ತು ಮರಿಗಳನ್ನು ಕಳೆದುಕೊಂಡು ಕಣ್ಣೀರು ಹಾಕುವಂತೆ ಮಾಡಿದ ಕುರಿಗಾಯಿ ನಷ್ಟಕ್ಕೆ ಪರಿಹಾರವನ್ನು ಒದಗಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.