ರಾಯಚೂರು:ರಾಜ್ಯದಲ್ಲಿ ಕೋವಿಡ್ ಪ್ರಕರಣ ಹೆಚ್ಚುತ್ತಿರುವ ಮಧ್ಯೆ ಇದ್ಯಾವುದರ ಭಯ ಇಲ್ಲದಂತೆ ರೈತರು ಲಿಂಗಸುಗೂರು ರೈತ ಸಂಪರ್ಕ ಕೇಂದ್ರದಲ್ಲಿ ನಿಯಮ ಪಾಲಿಸದೆ ಬಿತ್ತನೆ ಬೀಜಕ್ಕೆ ನೂಕುನುಗ್ಗಲು ನಡೆಸಿದ್ದು ಕಂಡು ಬಂತು.
ಮುಂಗಾರು ಹಂಗಾಮು ಬಿತ್ತನೆ ಆರಂಭಗೊಂಡಿದ್ದು, ಕೃಷಿ ಇಲಾಖೆ ರಿಯಾಯತಿ ದರದಲ್ಲಿ ಜೋಳ ಮತ್ತು ಕಡಲೆ ಬೀಜ ನೀಡಲು ಆರಂಭಿಸಿದೆ.
ರೈತ ಸಂಪರ್ಕ ಕೇಂದ್ರದಲ್ಲಿ ನೂಕುನುಗ್ಗಲು ಬ್ಯಾಂಕ್ ಪಾಸ್ ಬುಕ್, ಆಧಾರ್ ಕಾರ್ಡ್, ಪಹಣಿ ಸೇರಿದಂತೆ ಅಗತ್ಯ ದಾಖಲೆ ಹಾಗೂ ಪರಿಶಿಷ್ಟ ಜಾತಿ, ಪಂಗಡದವರು ಜಾತಿ ಪ್ರಮಾಣಪತ್ರ ಸಲ್ಲಿಕೆ ಮಾಡುವುದು ಕಡ್ಡಾಯವಾಗಿದೆ.
ಪರಿಶಿಷ್ಟ ಜಾತಿ, ಪಂಗಡದವರಿಗೆ ಶೇ. 75 ಹಾಗೂ ಇತರೆ ವರ್ಗದವರಿಗೆ ಶೇ. 50ರಷ್ಟು ರಿಯಾಯಿತಿ ಇದೆ. 20 ಕೆಜಿ ಪ್ಯಾಕೆಟ್ ಸಾಮಾನ್ಯರಿಗೆ ರೂ. 900, ಪರಿಶಿಷ್ಟರಿಗೆ ರೂ. 650ಕ್ಕೆ ದೊರಕುತ್ತಿದೆ.
ಎಕರೆಗೆ ಒಂದು ಪ್ಯಾಕೆಟ್ನಂತೆ ಗರಿಷ್ಠ 5 ಪ್ಯಾಕೆಟ್ ನೀಡಲಾಗುತ್ತಿದ್ದು, ಕೋವಿಡ್ ನಿಯಮ ಪಾಲನೆ ಕಡ್ಡಾಯ ಎಂದು ಕೃಷಿ ಇಲಾಖೆ ಸಹಾಯ ನಿರ್ದೇಶಕ ಮಹಾಂತೇಶ ಹವಲ್ದಾರ ತಿಳಿಸಿದ್ದಾರೆ.
ಎಷ್ಟೆಲ್ಲಾ ಜಾಗೃತಿ ಮೂಡಿಸಿದರೂ ಕೂಡ ರೈತರು ಮಾಸ್ಕ್ ಬಳಸುತ್ತಿಲ್ಲ. ಸ್ಯಾನಿಟೈಸರ್ ಬಳಕೆ ದೂರದ ಮಾತು. ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ ಮರೀಚಿಕೆಯಾಗಿದ್ದು, ರೈತ ಸಂಪರ್ಕ ಕೇಂದ್ರದ ಬಳಿ ಕೋವಿಡ್ ನಿಯಮ ಪಾಲಿಸುತ್ತಿಲ್ಲ. ಅಧಿಕಾರಿಗಳು ಹೇಳಿ ಹೇಳಿ ಬೇಸರಗೊಂಡಿದ್ದು, ಕೋವಿಡ್ ಸೋಂಕು ಹರಡುವಿಕೆ ನಿಯಂತ್ರಣ ಸವಾಲಾಗಿ ಪರಿಣಮಿಸಿದೆ.