ರಾಯಚೂರು : ಕುರುಬ ಸಮುದಾಯವನ್ನ ಎಸ್ಟಿಗೆ ಸೇರಿಸಬೇಕೆನ್ನುವ ಮೀಸಲಾತಿ ಹೋರಾಟ ಸಮಿತಿಯ ರಾಜ್ಯಾಧ್ಯಕ್ಷ, ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಬಿಜೆಪಿ ಸೇರ್ಪಡೆಯಾಗುತ್ತಾರೆ ಎನ್ನಲಾಗುತ್ತಿದೆ.
ಜಿಲ್ಲೆಯ ಸಿಂಧನೂರು ಮೂಲದವರಾದ ಕೆ.ವಿರೂಪಾಕ್ಷಪ್ಪ ಸದ್ಯ ಕಾಂಗ್ರೆಸ್ ನಲ್ಲಿದ್ದು, ಕುರುಬ ಸಮುದಾಯಕ್ಕೆ ಪರಿಶಿಷ್ಟ ಪಂಗಡದ ಮೀಸಲಾತಿ ಕಲ್ಪಿಸುವಂತೆ ನಡೆಸುತ್ತಿರುವ ಹೋರಾಟದ ರಾಜ್ಯಾಧ್ಯಕ್ಷರಾಗಿ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದೀಗ ಇವರನ್ನ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಸೇರಿದಂತೆ ಜಿಲ್ಲೆಯ ಬಿಜೆಪಿ ಶಾಸಕರು ಹಾಗೂ ಹಲವು ಮುಖಂಡರು ಕೆ.ವಿರೂಪಾಕ್ಷಪ್ಪನವರನ್ನ ಬಿಜೆಪಿಗೆ ಸೇರ್ಪಡೆಯಾಗುವಂತೆ ಸಂಪರ್ಕಿಸಿದ್ದಾರೆ. ಇವರ ಜೊತೆ ಬಿಜೆಪಿ ರಾಜ್ಯಾಧ್ಯಕ್ಷ ನಳೀಲ್ ಕುಮಾರ್ ಕಟೀಲ್ ಸಹ ಮಾತುಕತೆ ನಡೆಸಿದ್ದಾರೆ ಎನ್ನಲಾಗುತ್ತಿದೆ.
ಈ ಬಗ್ಗೆ ಕೆ.ವಿರೂಪಾಕ್ಷಪ್ಪ 'ಈಟಿವಿ ಭಾರತ' ಜೊತೆ ಮಾತನಾಡಿದ್ದು, ಬಿಜೆಪಿ ಸೇರ್ಪಡೆಯಾಗುವ ಕುರಿತಂತೆ ಚರ್ಚೆ ನಡೆದಿದೆ. ಬಿಜೆಪಿಯ ಹಲವು ನಾಯಕರು ಪಕ್ಷಕ್ಕೆ ಬರುವಂತೆ ದುಂಬಾಲು ಬಿದ್ದಿದ್ದಾರೆ. ಯುವ ಮುಖಂಡ ಬಿ.ವೈ. ವಿಜಯೇಂದ್ರ, ಮಾಜಿ ಶಾಸಕ ಪ್ರತಾಪ್ ಗೌಡ ಪಾಟೀಲ್ ಸೇರಿದಂತೆ ಜಿಲ್ಲೆಯ ಶಾಸಕರು, ಮುಖಂಡರು ಆಹ್ವಾನಿಸಿದ್ದಾರೆ. ಈ ಬಗ್ಗೆ ತಿರ್ಮಾನ ತೆಗೆದುಕೊಂಡಿಲ್ಲ. ನಮ್ಮ ಬೆಂಬಲಿಗರು ಹಾಗೂ ಕಾರ್ಯಕರ್ತರೊಂದಿಗೆ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳುತ್ತೇನೆ. ಅಲ್ಲದೇ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಜತೆ ಮಾತುಕತೆಯಾಗಿದೆ. ಆದ್ರೆ ನನ್ನ ಕೆಲವೊಂದು ಷರತ್ತುಗಳನ್ನ ಹಾಕಿದ್ದೇನೆ. ಅದನ್ನ ಅವರು ಒಪ್ಪಿದ್ದಾರೆ ಎಂದಿದ್ದಾರೆ.