ರಾಯಚೂರು: ಕೇಂದ್ರ ಸರ್ಕಾರ ಜಾರಿಗೊಳಿಸಿದ ತಿದ್ದುಪಡಿ ಕಾಯ್ದೆ ವಿರೋಧಿಸಿ ದೇಶದ ರಾಜಧಾನಿ ದೆಹಲಿಯಲ್ಲಿ ರೈತರು ನಡೆಸುತ್ತಿರುವ ಹೋರಾಟ ಹಿನ್ನೆಲೆ ತಿದ್ದುಪಡಿ ಕಾಯ್ದೆಗಳನ್ನು ಅಮಾನತ್ತಿನಲ್ಲಿ ಇಟ್ಟು ರೈತರೊಂದಿಗೆ ಮುಕ್ತ ಚರ್ಚೆಗೆ ಕೇಂದ್ರ ಸರ್ಕಾರ ಮುಂದಾಗಬೇಕು ಎಂದು ಸಮಾಜ ಪರಿವರ್ತನಾ ಸಮುದಾಯದ ಸಂಸ್ಥಾಪಕ ಎಸ್ ಆರ್ ಹೀರೆಮಠ ಒತ್ತಾಯಿಸಿದರು.
ಸಮಾಜ ಪರಿವರ್ತನಾ ಸಮುದಾಯದ ಸಂಸ್ಥಾಪಕ ಎಸ್ ಆರ್ ಹೀರೆಮಠ ನಗರದ ಕೃಷಿ ವಿಜ್ಞಾನ ಕೇಂದ್ರದಲ್ಲಿ, ಭಾರತದ ಕೃಷಿ ಬಿಕ್ಕಟ್ಟಿಗೆ ಕಾರಣ - ಪರಿಣಾಮ ಮತ್ತು ಪರಿಹಾರ ಕುರಿತು ಜನತಂತ್ರ ಪ್ರಯೋಗ ಶಾಲಾ, ಕರ್ನಾಟಕ ರಾಜ್ಯ ರೈತ ಸಂಘ, ಜನಸಂಗ್ರಾಮ ಪರಿಷತ್ ಮತ್ತು ಹೈದರಾಬಾದ್ ಕರ್ನಾಟಕ ಜನಾದೋಲನ ಕೇಂದ್ರ ಸಹಯೋಗದಲ್ಲಿ ಕೃಷಿ ಕ್ಷೇತ್ರದ ಸಮಸ್ಯೆ ಮತ್ತು ಪರಿಹಾರ ಕುರಿತು ಆಯೋಜಿಸಲಾಗಿದ್ದ ದುಂಡು ಮೇಜಿನ ಸಭೆ ಉದ್ಘಾಟಿಸಿ ಮಾತನಾಡಿದರು.
ದೇಶವು ಇಂದು ವಿರೋಧಾಭಾಸದ ಕಡೆ ನಡೆಯುತ್ತಿದ್ದು, ಇದರಿಂದ ಸಮಾಜಿಕ, ಆರ್ಥಿಕ ಅಸಮಾನತೆಗೆ ಕಾರಣವಾಗಲಿದೆ. ಈ ಅಸಮಾನತೆ ತಡೆಯದಿದ್ದರೆ ನಾವು ರಾಜಕೀಯ ಸ್ವಾತಂತ್ರ್ಯ ಕಳೆದುಕೊಳ್ಳುತ್ತವೆ. ದೇಶದಲ್ಲಿ ನಿಜವಾದ ಪ್ರಜಾಪ್ರಭುತ್ವ ಇದ್ದಿದ್ದರೆ ರೈತರು ವಿರೋಧಿಸುತ್ತಿರುವ ತಿದ್ದುಪಡಿ ಮೂರು ಕಾಯ್ದೆಗಳನ್ನು ಕೇಂದ್ರ ಸರ್ಕಾರ ಅಮಾನತಿನಲ್ಲಿಟ್ಟು ರೈತರೊಂದಿಗೆ ಮುಕ್ತ ಚರ್ಚೆಗೆ ಅವಕಾಶ ಕಲ್ಪಿಸಿದ್ದಲ್ಲಿ ಪ್ರಜಾಪ್ರಭುತ್ವ ಭಾಸವಾಗುತ್ತಿತ್ತು ಎಂದರು
ನೈಸರ್ಗಿಕ ಸಂಪನ್ಮೂಲಗಳನ್ನು ನಾವು ಇಂದು ಪ್ರಕೃತಿಯಿಂದ ಪ್ರಭುತ್ವದ ಅಡಿ ಇಟ್ಟ ನಂತರ ರೈತರಿಗೆ ಕಠಿಣ ಜೀವನ ಎದುರಾಗಿವೆ. 1994ರ ಭೂ ಸುಧಾರಣೆ ಕಾಯ್ದೆ ಹಾಗೂ 2014 ರಲ್ಲಿ ಮೋದಿ ಸರ್ಕಾರ ಜಾರಿಗೊಳಿದ ಕಾಯ್ದೆ ರೈತರಿಗೆ ಮರಣ ಶಾಸನವಾಗಲಿದ್ದು, ನಮ್ಮನು ಆಳುತ್ತಿರುವ ಸರ್ಕಾರ ಇತಿಹಾಸದಿಂದ ಕಲಿತುಕೊಳ್ಳದ್ದಿದ್ದರೆ ಅದು ಮರುಕಳಿಸುತ್ತದೆ ಎಂದು ಎಚ್ಚರಿಸಿದರು.
ಇಂದು ಮತ್ತು ನಾಳೆ ಎರಡು ದಿನಗಳ ಕಾಲ ನಡೆಯುವ ದುಂಡು ಮೇಜಿನ ಸಭೆಯಲ್ಲಿ ಕೃಷಿ ಕ್ಷೇತ್ರದ ಸಮಸ್ಯೆ ಹಾಗೂ ಪರಿಹಾರ ಕುರಿತು ಸುದೀರ್ಘ ಚರ್ಚೆ ನಡೆಯಲಿವೆ ಎಂದು ತಿಳಿಸಿದರು.