ಬ್ರಾಂಕೋಸ್ಕೋಪ್ ಮೂಲಕ ಹೊರತೆಗೆದ ರಿಮ್ಸ್ ವೈದ್ಯರು ರಾಯಚೂರು:ಆಟವಾಡುವ ಭರದಲ್ಲಿ ಬಾಲಕನೊಬ್ಬ ಗುಂಡು ಸೂಜಿ ನುಂಗಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ಸಿರವಾರ ತಾಲೂಕಿನ ಮುಚ್ಚುಳಗುಡ್ಡ ಕ್ಯಾಂಪ್ನ 13 ವರ್ಷದ ಬಾಲಕ ಶಿವಕುಮಾರ ದೇವರಾಜ ಶಾಲೆಯಲ್ಲಿ ಆಟವಾಡುವ ವೇಳೆ ನೋಟಿಸ್ ಬೋರ್ಡ್ ಅಂಟಿಸುವ ಗುಂಡು ಸೂಜಿಯನ್ನು ಬಾಯಿಯಲ್ಲಿ ಇಟ್ಟುಕೊಂಡಾಗ ಆಕಸ್ಮಿಕವಾಗಿ ನುಂಗಿದ್ದಾನೆ. ಪರಿಣಾಮ ಗುಂಡು ಸೂಜಿಯು ಬಲ ಶ್ವಾಸಕೋಶದೊಳಗಡೆ ಸೇರಿತ್ತು.
ಹೀಗಾಗಿ ಚಿಕಿತ್ಸೆಗಾಗಿ ಬಾಲಕನನ್ನು ರಿಮ್ಸ್ ಬೋಧಕ ಆಸ್ಪತ್ರೆಗೆ ದಾಖಲಿಸಲಾಯಿತು. ದಾಖಲಾದ ಬಾಲಕನ ಶ್ವಾಸಕೋಶದ ಎಕ್ಸ್ ರೇ ಮಾಡಿಸಿದಾಗ ಬಲ ಶ್ವಾಸಕೋಶದಲ್ಲಿ ಸೂಚನಾ ಫಲಕದ ಗುಂಡು ಇರುವುದು ಖಚಿತಪಡಿಸಿಕೊಂಡು, ಆಗ ರಿಮ್ಸ್ ವೈದ್ಯರ ತಂಡ ಬ್ರಾಂಕೋಸ್ಕೋಪ್ ಮೂಲಕ ಗುಂಡು ಸೂಜಿಯನ್ನು ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಶಸ್ತ್ರ ಚಿಕಿತ್ಸೆ ತಂಡದಲ್ಲಿ ಇಎನ್‌ಟಿ ತಜ್ಞ ವೈದ್ಯ ಡಾ. ಅರವಿಂದ್ ಸಂಗವಿ, ಅರವಳಿಕೆ ತಜ್ಞ ವೈದ್ಯ ಡಾ.ಕಿರಣ ನಾಯಕ, ಡಾ. ಮಲ್ಲಿಕಾರ್ಜುನ್ .ಕೆ ಪಾಟೀಲ್, ಡಾ.ಸಿಂಧು ಪಿಜಿ, ಡಾ.ಇಂದುಮಣಿ, ನರ್ಸಿಂಗ್ ಅಧಿಕಾರಿ ಅಮರೇಶ್ ಸಕ್ರಿ, ಓಟಿ ತಂತ್ರಜ್ಞರಾದ ಲಿಂಗರಾಜ್, ಸುಮನ್ ಕ್ಲ್ಯಾರಿ, ನಾರಾಯಣ, ಶಂಕರ ಸೇರಿದಂತೆ ಇನ್ನಿತರಿದ್ದರು.
ಬ್ರಾಂಕೋಸ್ಕೋಪ್ ಮೂಲಕ ಬಾಲಕನ ಶ್ವಾಸಕೋಸದಿಂದ ಸೂಜಿ ಹೊರತೆಗೆದ ರಿಮ್ಸ್ ವೈದ್ಯರು ಸಂಸ್ಥೆಯ ನಿರ್ದೇಶಕ ಡಾ.ಬಸವರಾಜ ಪೀರಾಪುರ್, ರಿಮ್ಸ್ ಮೆಡಿಕಲ್ ಕಾಲೇಜ ಪ್ರಾಂಶುಪಾಲ ಡಾ.ಬಸವರಾಜ್ ಎಂ ಪಾಟೀಲ್, ವೈದ್ಯಕೀಯ ಅಧೀಕ್ಷಕ ಡಾ.ಭಾಸ್ಕರ್ ಕೆಂಪೇಗೌಡ, ಇಎನ್‌ಟಿ ವಿಭಾಗದ ಮುಖ್ಯಸ್ಥ ಡಾ.ವೆಂಕಟೇಶ್ ಹಾಗೂ ಅರವಳಿಕೆ ಮುಖ್ಯಸ್ಥ ಡಾಕ್ಟರ್ ನಂದನ್ ಪಡಶೆಟ್ಟಿ, ಓಟಿ ಇಂಚಾರ್ಜ್ ಶುಶ್ರುಷಕ ಮೇಲ್ವಿಚಾರಕಿ ಆಶಾ ಹುಂಬಿ ಅತ್ಯುತ್ತಮ ಉಪಕರಣಗಳನ್ನು ಆಸ್ಪತ್ರೆಗೆ ಒದಗಿಸಿ ಶಸ್ತ್ರ ಚಿಕಿತ್ಸೆ ಯಶಸ್ವಿಗೊಳಿಸಿದ್ದಕ್ಕೆ ಇವರಿಗೆಲ್ಲ ಬಾಲಕನ ಕುಟುಂಬಸ್ಥರು ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ. ಸದ್ಯ ಶಿವಕುಮಾರ ಆರಾಮವಾಗಿ ಶಸ್ತ್ರಚಿಕಿತ್ಸೆ ಪಡೆದುಕೊಂಡು ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾನೆ.
ಇದನ್ನೂ ಓದಿ:ಗೋಪೂಜೆಯಲ್ಲಿ ಬಂಗಾರದ ಸರ ನುಂಗಿದ್ದ ಹಸು: ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆದ ಪಶುವೈದ್ಯರು
ಸೇಫ್ಟಿ ಪಿನ್ ನುಂಗಿದ್ದ 5 ತಿಂಗಳ ಮಗು: ಪಶ್ಚಿಮ ಬಂಗಾಳದಲ್ಲಿ ಈ ಘಟನೆ ನಡೆದಿತ್ತು. 5 ತಿಂಗಳ ಮಗು ಅಚಾನಕ್ ಆಗಿ ಸೇಫ್ಟಿ ಪಿನ್ ನುಂಗಿತ್ತು. ಇದು ಪೋಷಕರಿಗೆ ತಿಳಿದಿರಲಿಲ್ಲ. ಮಗುವಿಗೆ ಉಸಿರಾಟದ ತೊಂದರೆಯಾಗಲು ಆರಂಭವಾದಾಗ ಅವರು ಮಗುವನ್ನು ಕರೆದುಕೊಂಡು ಸಮೀಪ ವೈದ್ಯರ ಬಳಿ ಹೋದಾಗ ಶೀತ ಭಾದೆ ಉಂಟಾಗಿದೆ ಎಂದು ಚಿಕಿತ್ಸೆ ನೀಡಲು ಆರಂಭಿಸಿದರು. ಆದರೆ, ಆರೋಗ್ಯ ತೀವ್ರವಾಗಿ ಹದಗೆಟ್ಟಿದ್ದರಿಂದ ಕೋಲ್ಕತ್ತಾ ವೈದ್ಯಕೀಯ ಕಾಲೇಜಿಗೆ ದಾಖಲಿಸಿದರು. ಅಲ್ಲಿ ವೈದ್ಯರು ಎಕ್ಸ್ - ರೇ ಮಾಡಿದಾಗ ಶ್ವಾಸನಾಳದಲ್ಲಿ ಉದ್ದನೆಯ ಸೇಫ್ಟಿ ಪಿನ್ ಸಿಲುಕಿರುವುದು ಗೊತ್ತಾಗಿದೆ. ಫಿನ್ನ ಚುಪಾದ ಒಂದು ತುದಿ ಬಾಯ್ತೆರೆದುಕೊಂಡಿರುವುದನ್ನೂ ಕಂಡುಕೊಂಡರು. ಹೀಗಾಗಿ ಮಗುವಿಗೆ 40 ನಿಮಿಷದ ಕ್ಲಿಷ್ಟಕರ ಶಸ್ತ್ರಚಿಕಿತ್ಸೆ ನೆರವೇರಿಸಿ ಪಿನ್ ಅನ್ನು ಹೊರತೆಗೆದು ಮಗುವಿನ ಪ್ರಾಣ ಉಳಿಸಿದ್ದರು.