ರಾಯಚೂರು:ಲಂಬಾಣಿ ತಾಂಡಾ, ಕುರುಬರ ಹಟ್ಟಿ ಬಗ್ಗೆ ಯಾವ ಸರ್ಕಾರಗಳೂ ಗಮನ ಹರಿಸಿರಲಿಲ್ಲ. ನಮ್ಮ ಸರ್ಕಾರ ಅವುಗಳನ್ನು ಗ್ರಾಮಗಳನ್ನಾಗಿ ಪರಿವರ್ತಿಸಿದೆ. ಕಲ್ಯಾಣ ಕರ್ನಾಟಕದ 60 ಸಾವಿರ ಜನಕ್ಕೆ ಸ್ಥಳದಲ್ಲೇ ಹಕ್ಕು ಪತ್ರ ನೀಡುತ್ತೇವೆ. ನವೆಂಬರ್ ಕೊನೆ ವೇಳೆಗೆ ರಾಜ್ಯಾದ್ಯಂತ 1.5 ಲಕ್ಷ ಜನರಿಗೆ ಹಕ್ಕು ಪತ್ರ ವಿತರಣೆ ಮಾಡುತ್ತೇವೆ ಕಂದಾಯ ಸಚಿವ ಆರ್ ಅಶೋಕ್ ಸಿಹಿ ಸುದ್ದಿ ನೀಡಿದ್ದಾರೆ.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೂರು ತಿಂಗಳ ಕಾಲ ಈ ಪ್ರಕ್ರಿಯೆ ಜಾರಿಯಲ್ಲಿರುತ್ತದೆ ಎಂದು ತಿಳಿಸಿದರು. 94(c),94(cc) ಇತರೆ ಜಾತಿ ಜನಾಂಗದ ಬಡವರಿಗೂ ನೀಡುತ್ತೇವೆ ಎಂದು ಹೇಳಿದರು.
ಒತ್ತುವರಿ ತೆರವು ಮುಂದುವರಿಕೆ.. ಬೆಂಗಳೂರು ಸೇರಿ ರಾಜ್ಯದಲ್ಲಿ ಒತ್ತುವರಿ ವಿಚಾರದ ಬಗ್ಗೆ ಮಾತನಾಡಿದ ಸಚಿವರು, ಪ್ರತಿವಾರ ಒತ್ತುವರಿಗೆ ಸಂಬಂಧಿಸಿದ ಅರ್ಜಿ ವಿಲೇವಾರಿ ಮಾಡಲಾಗುವುದು. ಬೆಂಗಳೂರಿನ ಪೂರ್ವ ಭಾಗದಲ್ಲಿ ಲಕ್ಷಾಂತರ ಜನ ನೋವು ಅನುಭವಿಸಿದ್ದಾರೆ. ದೊಡ್ಡವರ ಒತ್ತುವರಿಗಳನ್ನೇ ತೆರವು ಮಾಡುವಂತೆ ಸೂಚಿಸಿದ್ದೇನೆ. ಕೋರ್ಟ್ ನಿಂದ ಸ್ಟೇ ಇರುವ ಕಡೆ ಸ್ಟೇ ತೆರವು ಮಾಡಲು ಎಲ್ಲ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ಫ್ಯಾಮಿಲಿ ಪ್ಯಾಕ್ ಪಾದಯಾತ್ರೆ.. ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವುದು ಫ್ಯಾಮಿಲಿ ಪ್ಯಾಕ್ ಪಾದಯಾತ್ರೆ. ಇದೇ ಸಿದ್ದರಾಮಯ್ಯ ಬೆಂಗಳೂರಿನಿಂದ ಬಳ್ಳಾರಿಗೆ ಪಾದಯಾತ್ರೆ ಮಾಡಿದ್ರು. ಆದ್ರೆ ಸೋನಿಯಾ ಗಾಂಧಿ ಬಂದಿದ್ರಾ? ಬಂಡೆ ಅಂತೀರಲ್ಲ, ಅವರು ಪಾದಯಾತ್ರೆ ಮಾಡಿದಾಗ ಯಾರು ಬಂದ್ರು? ಹಸು, ಕರು ಗುರುತು ಮತ್ತೆ ಬಂದಿದೆ. ಸೋರುತಿಹುದು ಕಾಂಗ್ರೆಸ್ ಮನೆಯ ಮಾಳಿಗೆ ಎಂದು ಸಚಿವ ಅಶೋಕ್ ವ್ಯಂಗ್ಯವಾಡಿದರು.
ದಲಿತರ ಮನೆಗಳಲ್ಲಿ ಊಟ ಮಾಡಿದ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, 21 ನೇ ಶತಮಾನದಲ್ಲೂ ಅಸ್ಪೃಶ್ಯತೆ ಆಚರಣೆ ನಡೆಯುತ್ತಿರುವುದು ಸರಿಯಲ್ಲ. ಇದು ಹೋಗಬೇಕು ಅಂತ ಅರಿವು ಮೂಡಿಸಲು ಈ ಕಾರ್ಯಕ್ರಮ. ಸಮಾಜಕ್ಕೆ ಕಳಂಕವಾಗಿರುವ ಪದ್ಧತಿ ಹೋಗಲಾಡಿಸಲು ಇದನ್ನು ಮಾಡಲಾಗುತ್ತಿದೆ ಎಂದರು.