ರಾಯಚೂರು:ಬಾಲ್ಯ ವಿವಾಹ ಪದ್ಧತಿ ನಿಷೇಧಿಸಿ, ಕಠಿಣ ಕಾನೂನು ಜಾರಿ ಮಾಡಿದ್ದರೂ ರಾಜ್ಯದಲ್ಲಿ ಬಾಲ್ಯವಿವಾಹಗಳು ನಿಂತಿಲ್ಲ. ಕೊರೊನಾ ಲಾಕ್ಡೌನ್ ನಡುವೆಯೂ ರಾಯಚೂರು ಜಿಲ್ಲೆಯಲ್ಲಿ ಸದ್ದಿಲ್ಲದೆ ಬಾಲ್ಯ ವಿವಾಹಗಳು ನಡೆದಿದ್ದು, ಹಲವು ವಿವಾಹಗಳನ್ನು ತಡೆಯಲಾಗಿದೆ.
ಬಾಲ್ಯ ವಿವಾಹ ಶಿಕ್ಷಾರ್ಹ ಅಪರಾಧ. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನ ಸರ್ಕಾರ ಮಾಡುತ್ತಿದೆ. ಬಾಲ್ಯ ವಿವಾಹ ತಪ್ಪು ಎನ್ನುವುದು ಪಾಲಕರಿಗೆ ತಿಳಿದಿದ್ದರೂ ಅಪ್ರಾಪ್ತೆಯರನ್ನ ಮದುವೆಯ ಸಂಕೋಲೆಗೆ ದೂಡುತ್ತಿದ್ದಾರೆ. ಕಾನೂನಿನ ಪ್ರಕಾರ ಯುವಕನಿಗೆ 21 ವರ್ಷ, ಯುವತಿ 18 ವಯೋಮಿತಿ ಹೊಂದಿರಬೇಕು. ಆದ್ರೆ 21 ವರ್ಷ ಮೇಲ್ಪಟ್ಟ ಯುವಕರಿಗೆ ಅಪ್ರಾಪ್ತ ವಯಸ್ಸಿನ ಬಾಲಕಿಯನ್ನ ಮದುವೆ ಮಾಡುತ್ತಿದ್ದಾರೆ.
ರಾಯಚೂರು ಜಿಲ್ಲೆಯಲ್ಲಿ ಲಾಕ್ಡೌನ್ ಜಾರಿಯಾದ ವೇಳೆ 25 ಬಾಲ್ಯ ವಿವಾಹ ಪ್ರಕರಣಗಳು ವರದಿಯಾಗಿವೆ. ಈ 25 ಪ್ರಕರಣಗಳಲ್ಲಿ ಮೂರು ಬಾಲ್ಯ ವಿವಾಹಗಳು ನಡೆದಿದ್ದು, ಇನ್ನುಳಿದ 22 ವಿವಾಹಗಳನ್ನು ತಡೆ ಹಿಡಿಯಲಾಗಿದೆ. ಕಾನೂನಿಗೆ ವಿರುದ್ದವಾಗಿ ರಾಯಚೂರು ತಾಲೂಕಿನಲ್ಲಿ 2 ಹಾಗೂ ದೇವದುರ್ಗ ತಾಲೂಕಿನ 1 ಬಾಲ್ಯ ವಿವಾಹ ನಡೆದಿದೆ.