ರಾಯಚೂರು:ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸಿ.ಬಿ. ವೇದಮೂರ್ತಿ ಗಣೇಶ ಹಬ್ಬಕ್ಕೆ ಪ್ಲಾಸ್ಟರ್ ಆಫ್ ಪ್ಯಾರೀಸ್ ದಿಂದ ತಯಾರಾದ ಗಣೇಶನ ಬದಲು, ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನ ಪ್ರತಿಷ್ಠಾಪಿಸುವಂತೆ ಜನರಿಗೆ ಮನವಿ ಮಾಡಿದ್ದಾರೆ.
ಉಚಿತವಾಗಿ 100 ಪರಿಸರ ಸ್ನೇಹಿ ಗಣಪ ನೀಡಲು ಮುಂದಾದ್ರು ರಾಯಚೂರು ಎಸ್ಪಿ - kannadanews
ರಾಯಚೂರು ಎಸ್ಪಿ ಡಾ. ಸಿ.ಬಿ. ವೇದಮೂರ್ತಿ ಅವರು ಗಣೇಶ ಹಬ್ಬಕ್ಕೆ ಸುಮಾರು 100 ಪರಿಸರ ಸ್ನೇಹಿ ಮೂರ್ತಿಗಳನ್ನ ಸಾರ್ವಜನಿಕರಿಗೆ ಉಚಿತವಾಗಿ ವಿತರಿಸಲು ಮುಂದಾಗಿದ್ದಾರೆ.

ಮಣ್ಣಿನಿಂದ ತಯಾರಿಸಿದ 100 ಗಣೇಶ ಮೂರ್ತಿಗಳನ್ನ ಸಾರ್ವಜನಿಕರಿಗೆ ನೀಡಲು ಎಸ್ಪಿ ಸಿದ್ಧತೆ ಮಾಡಿಕೊಂಡಿದ್ದಾರೆ. ಪ್ಲಾಸ್ಟರ್ ಆಫ್ ಪ್ಯಾರಿಸ್ ಬಳಸಿದ ಗಣೇಶ ಮೂರ್ತಿಗಳಿಂದಾಗಿ ಪರಿಸರಕ್ಕೆ ಸಾಕಷ್ಟು ಹಾನಿಯಾಗುತ್ತದೆ. ಅಲ್ಲದೇ ನೀರಿನಲ್ಲಿ ಮೂರ್ತಿಗಳ ನಿಮಜ್ಜನ ಮಾಡುವುದರಿಂದ ನೀರು ಕಲುಷಿತವಾಗುತ್ತಿದೆ. ಇದನ್ನು ಅರಿತು ಮಣ್ಣಿನಿಂದ ತಯಾರಿಸಲಾದ ನೀರಿನಲ್ಲಿ ಕರಗುವ ಗಣೇಶ ಮೂರ್ತಿಗಳನ್ನು ತಯಾರಿಸಲಾಗಿದೆ. ಈಗಗಾಲೇ ನಗರದ ಪಟೇಲ್ ರಸ್ತೆಯಲ್ಲಿರುವ ರಾಮಸಿಂಗ್ ಎಂಬ ಕಲಾವಿದರು ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ನೀಡಿದ್ದು, ಅವುಗಳನ್ನು ಡಾ. ಸಿ.ಬಿ. ವೇದಮೂರ್ತಿ ಉಚಿತವಾಗಿ ವಿತರಿಸುತ್ತಿದ್ದಾರೆ.
ಇದೀಗ ವಿತರಣೆ ಮಾಡಲಾಗುತ್ತಿರುವ ಪರಿಸರ ಸ್ನೇಹಿ ಗಣೇಶ ಮೂರ್ತಿಗಳಲ್ಲಿ ಹಿರೇಕಾಯಿ, ಬೆಂಡೆಕಾಯಿ ಸೇರಿದಂತೆ ನಾನಾ ಬಗೆಯ ತರಕಾರಿಗಳ ಬೀಜಗಳನ್ನು ಹಾಕಲಾಗಿದ್ದು, ಅಲಂಕಾರಿಕ ಸಸಿ ಬೆಳೆಸುವ ಪಾಟ್ನಲ್ಲಿ ಗಣೇಶ ಮೂರ್ತಿಯನ್ನಿಟ್ಟು ನೀರು ಹಾಕಿ ನಿಮಜ್ಜನ ಮಾಡಿದರೆ, ಪರಿಸರ ಹಾನಿ ತಪ್ಪುವುದರ ಜತೆಗೆ ತರಕಾರಿ ಸಸಿಗಳು ಬೆಳೆದು ಮುಂದಿನ ದಿನಗಳಲ್ಲಿ ಮನೆಗೆ ಸಹಾಯಕವಾಗುತ್ತದೆ ಎಂದು ಹೇಳುತ್ತಿದ್ದಾರೆ. ಸದ್ಯ ಎಸ್ಪಿಯವರ ಈ ಹೊಸ ಐಡಿಯಾಗೆ ಜನರಿಂದ ಮೆಚ್ಚುಗೆ ವ್ಯಕ್ತವಾಗಿದೆ.