ರಾಯಚೂರು : ಜಿಲ್ಲೆಯಲ್ಲಿ ಬೆಚ್ಚಿಬೀಳಿಸುವ ಪ್ರಕರಣವೊಂದು ಬೆಳಕಿಗೆ ಬಂದಿದೆ. ಕಾಮಾತುರಂ ನ ಲಜ್ಜಾ, ನ ಭಯಂ ಎಂಬಂತೆ ಕಾಮುಕ ವ್ಯಕ್ತಿಯೋರ್ವ ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲೆ ಅಟ್ಟಹಾಸ ಮೆರೆದಿದ್ದಾನೆ. ಜಿಲ್ಲೆಯ ಸಿಂಧನೂರು ತಾಲೂಕಿನಲ್ಲಿ ಈ ಘಟನೆ ನಡೆದಿದ್ದು, ಆರೋಪಿಯನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದು, ಸದ್ಯ ಕಂಬಿ ಹಿಂದೆ ತಳ್ಳಿದ್ದಾರೆ.
ಹೌದು, ಸ್ಕೂಟಿ ಕಲಿಸುವ ನೆಪದಲ್ಲಿ ಕರೆದೊಯ್ದು 11 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿರುವ ಈ ಪ್ರಕರಣ ಜಿಲ್ಲೆಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಸಪನ್ ಮಂಡಲ್ (52) ಬಂಧಿತ ಆರೋಪಿ. ಸದ್ಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಚಾಕೊಲೇಟ್ ಕೊಡಿಸುವುದಾಗಿ ಕರೆದೊಯ್ದು ದುಷ್ಕೃತ್ಯ.. ಕಳೆದ ಜೂನ್ 19ರಂದು ಘಟನೆ ನಡೆದಿದೆ. 4ನೇ ತರಗತಿ ಓದುತ್ತಿರುವ ಬಾಲಕಿ ಎಂದಿನಂತೆ ಮನೆಯಲ್ಲಿ ಊಟ ಮಾಡಿ ಶಾಲೆಗೆ ಹೋಗಲು ಸಿದ್ಧವಾಗಿ ಮನೆಯ ಮುಂದೆ ಆಟವಾಡುತ್ತಿದ್ದಳು. ಈ ವೇಳೆ ಸಪನ್ ಮಂಡಲ್ ಎಂಬಾತ ಬಾಲಕಿಯನ್ನು ಚಾಕೊಲೇಟ್ ಕೊಡಿಸುವುದಾಗಿ ಪುಸಲಾಯಿಸಿ ತನ್ನ ಸ್ಕೂಟಿಯಲ್ಲಿ ಕರೆದುಕೊಂಡು ಹೋಗಿದ್ದಾನೆ. ಬಳಿಕ ಚಾಕೊಲೇಟ್ ಕೊಡಿಸದೇ ಸ್ಕೂಟಿ ಕಲಿಸುತ್ತೇನೆ ಎಂದು ಕರೆದುಕೊಂಡು ನಿರ್ಜನ ಪ್ರದೇಶವೊಂದಕ್ಕೆ ಕರೆದುಕೊಂಡು ಹೋಗಿ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಕೃತ್ಯದ ಬಳಿಕ ಆರೋಪಿಯು ಬಾಲಕಿಯನ್ನು ಮನೆಯಿಂದ ತುಸು ದೂರ ಬಿಟ್ಟು ಪರಾರಿಯಾಗಿದ್ದಾನೆ.