ರಾಯಚೂರು: ಆಕಾಲಿಕ ಮಳೆಯಿಂದಾಗಿ ಬಿಸಿಲೂರಿನ ಅನ್ನದಾತರ ಬೆಳೆ ಹಾನಿಯಾಗಿದ್ದು, ಸಂಕಷ್ಟ ಎದುರಾಗಿದೆ. ಜಿಲ್ಲೆಯ ನಾನಾ ಕಡೆಗಳಲ್ಲಿ ವರುಣ ಆರ್ಭಟಿಸಿದ್ದಾನೆ. ರಾಯಚೂರು ನಗರದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ(ಎಪಿಎಂಸಿ) ಆವರಣದಲ್ಲಿ ವರ್ತಕರ ಅಂಗಡಿಗಳ ಮುಂದೆ ಹಾಕಿದ್ದ ಬೆಳೆ ನೀರಿನಿಂದ ತೋಯ್ದು ಸಾಕಷ್ಟು ನಷ್ಟವಾಗಿದೆ ಎಂದು ರೈತರು ತಿಳಿಸಿದ್ದಾರೆ.
ನಿನ್ನೆ ಮಧ್ಯಾಹ್ನ ಸುರಿದ ಜೋರು ಮಳೆಗೆ ಎಪಿಎಂಸಿ ಆವರಣದ ವರ್ತಕ ಅಂಗಡಿ ಮುಂಭಾಗ ರೈತರು ಭತ್ತ, ಶೇಂಗಾ, ಈರುಳ್ಳಿ ಫಸಲು ಸೇರಿದಂತೆ ನಾನಾ ದವಸ-ಧಾನ್ಯಗಳನ್ನು ರಾಶಿ ಹಾಕಿದ್ದರು. ಎಪಿಎಂಸಿ ಆವರಣದಲ್ಲಿ ನೀರು ಸರಾಗವಾಗಿ ಚರಂಡಿಗೆ ಹರಿದು ಹೋಗಬೇಕು. ಆದರೆ ರೈತರು ಫಸಲು ಹಾಕುವ ಸ್ಥಳಕ್ಕೆ ಮಳೆ ನೀರು ಹರಿದಿದೆ. ಟಿನ್ಶೆಡ್ಗಳು ಸಹ ಸೋರಿಕೆಯಾಗಿ ಬೆಳೆಗೆ ನೀರು ಬಿದ್ದಿದೆ. ರೈತರು ತೋಯ್ದ ಬೆಳೆಯನ್ನು ಮಳೆ ನಿಂತ ಬಳಿಕ ಚೀಲದಲ್ಲಿ ತುಂಬುತ್ತಿದ್ದರು. ಇದೀಗ ಕಡಿಮೆ ಬೆಲೆಗೆ ಫಸಲು ಮಾರಾಟವಾಗುತ್ತದೆ ಎನ್ನುವ ಆಂತಕ ರೈತರನ್ನು ಕಂಗಾಲಾಗಿಸಿದೆ.