ಕರ್ನಾಟಕ

karnataka

ETV Bharat / state

ರಾಯಚೂರಲ್ಲಿ ಝೀಕಾ ವೈರಸ್​ ಆತಂಕ; ಕಟ್ಟೆಚ್ಚರ ಕ್ರಮಕ್ಕೆ ಮುಂದಾದ ಆರೋಗ್ಯಾಧಿಕಾರಿಗಳು

ಬಾಲಕಿಗೆ ಸೋಂಕು ದೃಢವಾಗಿರುವ ಹಿನ್ನಲೆ ನೀರಮಾನವಿಯ ಕೋಳಿ ಕ್ಯಾಂಪ್ ಹಾಗೂ ನೀರಮಾನ್ವಿ, ನೀರಮಾನವಿ ತಾಂಡಾ, ರಾಧಾಕೃಷ್ಣಾ ಕ್ಯಾಂಪ್, ಹರವಿ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಎಲ್ಲಾ ಗ್ರಾಮಗಳಲ್ಲಿ ಜನರ ರಕ್ತದ ಮಾದರಿಗಳನ್ನು ಸಂಗ್ರಹಿಸುವಂತೆ ತಿಳಿಸಲಾಗಿದೆ.

By

Published : Dec 14, 2022, 11:32 AM IST

ರಾಯಚೂರು: ಝೀಕಾ ವೈರಸ್​ ಆತಂಕ; ಕಟ್ಟೆಚ್ಚರ ಕ್ರಮಕ್ಕೆ ಮುಂದಾದ ಆರೋಗ್ಯಾಧಿಕಾರಿಗಳು
raichur-zika-virus-worry-health-officials-have-taken-drastic-measures

ರಾಯಚೂರು:ಇಲ್ಲಿನ ಮಾನ್ವಿ ತಾಲೂಕಿನ ನೀರಮಾನ್ವಿ ಗ್ರಾಮದ ಕೋಳಿ ಕ್ಯಾಂಪ್ ಬಾಲಕಿಗೆ ಝೀಕಾ ವೈರಸ್​ ದೃಢಪಟ್ಟಿರುವುದು ರಾಜ್ಯದಲ್ಲಿ ಆತಂಕ ಮೂಡಿಸಿದ್ದು, ಮುಂಜಾಗ್ರತ ಕ್ರಮಕ್ಕೆ ಆರೋಗ್ಯ ಇಲಾಖೆ ಮುಂದಾಗಿದೆ. ಈ ಸಂಬಂಧ ಆರೋಗ್ಯ ಇಲಾಖೆ ಹಾಗೂ ಇನ್ನಿತರ ಇಲಾಖೆಯ ಅಧಿಕಾರಿಗಳೊಂದಿಗೆ ನಗರದಲ್ಲಿ ಪ್ರಮುಖ ಸಭೆ ನಡೆಸಲಾಗಿದ್ದು, ಕಟ್ಟೆಚ್ಚರ ಕ್ರಮದ ಬಗ್ಗೆ ಚರ್ಚಿಸಲಾಗಿದೆ.

ಬಾಲಕಿಗೆ ಸೋಂಕು ದೃಢವಾಗಿರುವ ಹಿನ್ನೆಲೆ ನೀರಮಾನವಿಯ ಕೋಳಿ ಕ್ಯಾಂಪ್ ಹಾಗೂ ನೀರಮಾನ್ವಿ, ನೀರಮಾನವಿ ತಾಂಡಾ, ರಾಧಾಕೃಷ್ಣ ಕ್ಯಾಂಪ್, ಹರವಿ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಎಲ್ಲಾ ಗ್ರಾಮಗಳಲ್ಲಿ ಜನರ ರಕ್ತದ ಮಾದರಿಗಳನ್ನು ಸಂಗ್ರಹಿಸುವಂತೆ ತಿಳಿಸಲಾಗಿದೆ. ಜೊತೆಗೆ ಈ ಗ್ರಾಮಗಳಲ್ಲಿ ಸೊಳ್ಳೆಗಳು ಹೆಚ್ಚಾಗದಂತೆ ಫಾಗಿಂಗ್ ಮಾಡಿಸುವಂತೆ ಸೂಚನೆ ನೀಡಿದರು.

ಇದೇ ವೇಳೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುರೇಂದ್ರಬಾಬು ಮಾತನಾಡಿ, ಆರೋಗ್ಯ ಸಚಿವರ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತರ ಆದೇಶದಂತೆ ಝೀಕಾ ವೈರಸ್ ಹರಡದಂತೆ ಜಿಲ್ಲೆಯಲ್ಲಿ ಎಲ್ಲಾ ರೀತಿಯ ಸೂಕ್ತ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸಾರ್ವಜನಿಕರು ಯಾವುದೇ ಆತಂಕ ಪಡುವ ಅಗತ್ಯವಿಲ್ಲ, ಒಂದು ವೇಳೆ ಸಾಮಾನ್ಯರು ಹಾಗೂ ಗರ್ಭಿಣಿಯರಲ್ಲಿ ಅಧಿಕ ಜ್ವರ ಕಂಡುಬಂದಲ್ಲಿ ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರ ಅಥವಾ ಸರ್ಕಾರಿ ಆಸ್ಪತ್ರೆಗಳಿಗೆ ಭೇಟಿ ನೀಡಿ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.

ಸೊಳ್ಳೆಗಳಿಂದಲೇ ಈ ವೈರಸ್ ಅತ್ಯಂತ ವೇಗವಾಗಿ ಹರಡುವುದರಿಂದ ಗ್ರಾಮದಲ್ಲಿ ಹಾಗೂ ಜಿಲ್ಲೆಯಾದ್ಯಂತ ಎಲ್ಲಾ ಗ್ರಾಮಗಳಲ್ಲಿ ಜನರು ಸ್ವಚ್ಛತೆ ಹಾಗೂ ನೀರು ನಿಲ್ಲದಂತೆ ನೋಡಿಕೊಳ್ಳುವಂತೆ ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.

ಈ ವೇಳೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಶಶಿಧರ ಕುರೇರ, ಆರ್.ಓ.ಹೆಚ್.ಎಫ್.ಡಬ್ಲ್ಯೂನ ಹಿರಿಯ ಪ್ರಾದೇಶಿಕ ನಿರ್ದೇಶಕಿ ಡಾ.ಸ್ಮಿತಾ, ಎನ್.ಸಿ.ಡಿ.ಸಿ ಉಪನಿರ್ದೇಶಕ ಕೆ.ಶುಭಂಗಿ, ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರದ ಡಾ.ಕೆ.ರೇಗು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ರಾಜ್ಯ ಕಣ್ಗಾವಲು ಘಟಕದ ಉಪನಿರ್ದೇಶಕ ಮಹ್ಮದ್ ಶರೀಫ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಇದನ್ನೂ ಓದಿ: ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿ ನೀಡಲು ಸಜ್ಜಾಗಿರುವ ಸರ್ಕಾರ: ಸಂಪುಟ ಉಪಸಮಿತಿ ರಚನೆ

ABOUT THE AUTHOR

...view details