ರಾಯಚೂರು: ಜಿಲ್ಲೆಯಲ್ಲಿ ಭೀಕರ ಸರಣಿ ಅಪಘಾತ ಸಂಭವಿಸಿದೆ. ಸಾರಿಗೆ ಇಲಾಖೆಯ ಬಸ್ ಚಕ್ರಕ್ಕೆ ಸಿಲುಕಿ ಬೈಕ್ ಸವಾರನೋರ್ವ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಸಿಂಧನೂರು ಪಟ್ಟಣದ ಹೊರವಲಯದ ಹೊಸಳ್ಳಿ ಕ್ಯಾಂಪ್ ಬಳಿಯ ಖಾಸಗಿ ಪೆಟ್ರೋಲ್ ಬಂಕ್ ಮುಂಭಾಗ ನಡೆದಿದೆ. ಪಟ್ಟಣದ ಗಂಗಾ ನಗರ ನಿವಾಸಿ ಉದಯ ಕುಮಾರ್(21) ಮೃತ ಬೈಕ್ ಸವಾರ.
ಮೊದಲಿಗೆ ಎರಡು ಬೈಕ್ಗಳ ನಡುವೆ ಡಿಕ್ಕಿ ಸಂಭವಿಸಿ, ಇಬ್ಬರು ಬೈಕ್ ಸವಾರರು ರಸ್ತೆಯ ಮೇಲೆ ಬಿದ್ದಿದ್ದಾರೆ. ಇದೇ ವೇಳೆ ಮುಂದಿನಿಂದ ಬರುತ್ತಿದ್ದ ಸಾರಿಗೆ ಬಸ್ ರಸ್ತೆಯ ಮೇಲೆ ಬಿದ್ದಿದ್ದ ಯುವಕನ ಮೇಲೆ ಹರಿದಿದ್ದು, ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಹೇಳಲಾಗುತ್ತಿದೆ. ಘಟನೆಯ ದೃಶ್ಯಾವಳಿ ಸಿ ಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.