ರಾಯಚೂರು:ರಾಜ್ಯ ಸರ್ಕಾರ ಮಂಡಿಸಲಿರುವ ಪ್ರಸಕ್ತ ವರ್ಷದ ಬಜೆಟ್ನಲ್ಲಿ ರಾಯಚೂರು ನೂತನ ವಿಶ್ವವಿದ್ಯಾಲಯಕ್ಕೆ 100 ಕೋಟಿ ರೂಪಾಯಿ ಅನುದಾನ ನೀಡುವ ನಿರೀಕ್ಷೆಯಿದೆ ಎಂದು ಕುಲಪತಿ ಪ್ರೊ. ಹರೀಶ್ ರಾಮಸ್ವಾಮಿ ಹೇಳಿದ್ದಾರೆ.
ನೂರು ಕೋಟಿ ಅನುದಾನದ ನಿರೀಕ್ಷೆಯಲ್ಲಿ ರಾಯಚೂರು ನೂತನ ವಿವಿ - ಕುಲಪತಿ ಪ್ರೋ.ಹರೀಶ್ ರಾಮಸ್ವಾಮಿ
ಸರ್ಕಾರ ಪ್ರಸಕ್ತ ವರ್ಷದ ಬಜೆಟ್ನಲ್ಲಿ ರಾಯಚೂರು ನೂತನ ವಿಶ್ವವಿದ್ಯಾಲಯಕ್ಕೆ 100 ಕೋಟಿ ರೂಪಾಯಿ ಅನುದಾನವನ್ನು ನೀಡುವ ನಿರೀಕ್ಷೆಯಿದೆ ಎಂದು ಕುಲಪತಿ ಪ್ರೊ. ಹರೀಶ್ ರಾಮಸ್ವಾಮಿ ಹೇಳಿದ್ದಾರೆ.
ರಾಯಚೂರು ತಾಲೂಕಿನ ಹೊರವಲಯದ ಯರಗೇರಾ ಗ್ರಾಮದ ಬಳಿರುವ ವಿವಿ ಆವರಣದಲ್ಲಿ ಆಡಿಟೋರಿಯಂ ಹಾಲ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೂತನ ವಿವಿಗೆ 600 ಕೋಟಿ ರೂಪಾಯಿ ಅವಶ್ಯಕತೆಯಿದೆ. ಆದ್ರೆ ಕೊರೊನಾ ಎಫೆಕ್ಟ್ನಿಂದ ಸರ್ಕಾರಕ್ಕೂ ಆರ್ಥಿಕವಾಗಿ ತೊಂದರೆ ಎದುರಾಗಿದೆ. ಹೀಗಾಗಿ ಆರಂಭಿಕ ಹಂತವಾಗಿ 100 ಕೋಟಿ ರೂಪಾಯಿ ಅನುದಾನವನ್ನ ನೀಡಬಹುದು ಎನ್ನುವ ನಿರೀಕ್ಷೆಯಲ್ಲಿದ್ದೇವೆ ಎಂದರು.
ರಾಯಚೂರು ವಿಶ್ವವಿದ್ಯಾಲಯ ಘೋಷಣೆಯಾಗಿ 100 ದಿನಗಳು ಪೂರೈಸಿವೆ. ಇಷ್ಟು ದಿನಗಳಲ್ಲಿ ಕಟ್ಟಡ ವಿನ್ಯಾಸ, ಲಾಂಛನ, ಉಪನ್ಯಾಸಕರ ನೇಮಕ, ಪ್ರೊಫೆಸರ್, ನಾನ್ ಟೆಕ್ನಿಕಲ್ ಸಿಬ್ಬಂದಿಯ ನೇಮಕಾತಿ ವಿಚಾರ ಹಾಗೂ ಕುಡಿಯುವ ನೀರು ಪೂರೈಕೆ, ಹಾಸ್ಟೆಲ್ಗಳ ನಿರ್ಮಾಣ, ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಆಸ್ತಿ ಹಸ್ತಾಂತರ ಮಾಡಿಕೊಳ್ಳುವಂತಹ ಪ್ರಕ್ರಿಯೆಗಳು ನಡೆದಿವೆ. ಗುಲ್ಬರ್ಗಾ ವಿವಿಯಿಂದ ಇನ್ನೂ ಕೆಲ ದಿನಗಳಲ್ಲಿ ರಾಯಚೂರು ವಿವಿಗೆ ಆಸ್ತಿ ಹಸ್ತಾಂತರ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದರು.