ಮೀಸಲಾತಿ ಆದೇಶ ಹಿಂಪಡೆಯುವಂತೆ ಕೃಷಿ ವಿವಿ ವಿದ್ಯಾರ್ಥಿಗಳಿಂದ ಪ್ರತಿಭಟನೆ ರಾಯಚೂರು:ಇಲ್ಲಿನ ಕೃಷಿ ವಿಶ್ವವಿದ್ಯಾಲಯದ ಬಿ.ಟೆಕ್ (ತಾಂತ್ರಿಕ) ಪದವೀಧರ ವಿದ್ಯಾರ್ಥಿಗಳು ಮುಖಕ್ಕೆ ಕಪ್ಪು ಬಣ್ಣ ಹಚ್ಚಿಕೊಂಡು ವಿಭಿನ್ನವಾಗಿ ಪ್ರತಿಭಟನೆ ಮಾಡಿದರು. ನಗರದ ಹೊರವಲಯದಲ್ಲಿರುವ ರಾಯಚೂರು ಕೃಷಿ ವಿಶ್ವವಿದ್ಯಾಲಯದ ಕೃಷಿ ತಾಂತ್ರಿಕ ಮಹಾವಿದ್ಯಾಲಯದಿಂದ ಕುಲಪತಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಹಲವು ದಿನಗಳಿಂದ ದಿನಗಳಿಂದ ಅಹೋರಾತ್ರಿ ಧರಣಿ ಕುಳಿತ ವಿದ್ಯಾರ್ಥಿಗಳು ಬೇಡಿಕೆ ಈಡೇರುವವರೆಗೂ ತರಗತಿ ಬಹಿಷ್ಕರಿಸಿ ತಾಂತ್ರಿಕ ಮಹಾವಿದ್ಯಾಲಯದ ಎದುರು ಹೋರಾಟಕ್ಕೆ ನಿರ್ಧರಿಸಿದ್ದಾರೆ.
ಬೇಡಿಕೆಯೇನು?: ಕೃಷಿ ಬಿ.ಟೆಕ್ ಪದವಿ ನಾಲ್ಕು ವರ್ಷದವರೆಗೆ ವಿದ್ಯಾಭ್ಯಾಸ ಮಾಡುವ ಕೋರ್ಸ್ ಆಗಿದೆ. ಈ ಪದವಿ ಮುಗಿದು ತೇರ್ಗಡೆಯಾದ ನಂತರದಲ್ಲಿ ಸರ್ಕಾರದ ಕೃಷಿ ಇಲಾಖೆ ಅಡಿಯಲ್ಲಿ ಬರುವಂತಹ ಎಒ ಹಾಗೂ ಎಎಒ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹತೆ ಪಡೆದುಕೊಳ್ಳುತ್ತಾರೆ. ಇದುವರೆಗೆ ಬಿ.ಟೆಕ್ ವಿಭಾಗದ ಪದವೀಧರರಿಗೆ ನಡೆದ ನೇಮಕಾತಿ ಪ್ರಕ್ರಿಯೆಯಲ್ಲಿ ಶೇ. 15ರಷ್ಟು ಮೀಸಲಾತಿ ನೀಡಲಾಗಿತ್ತು.
ಆದರೆ ಇತ್ತೀಚೆಗೆ ಸರ್ಕಾರ ಈ ಮೀಸಲಾತಿಯಲ್ಲಿ ಬದಲಾವಣೆ ಮಾಡಿದೆ. ಕೇವಲ ಬಿ.ಟೆಕ್ ಪದವೀಧರ ವಿದ್ಯಾರ್ಥಿಗಳಿಗೆ ಅಷ್ಟೇ ಇದ್ದ ಮೀಸಲಾತಿಯನ್ನು ಇತರೆ ವಿಭಾಗದ ಬಿ.ಟೆಕ್ ಪದವೀಧರರಿಗೂ ಹಂಚಿಕೆ ಮಾಡಿ ಸರ್ಕಾರ ಆದೇಶ ನೀಡಿತ್ತು. ಸರ್ಕಾರದ ಈ ಆದೇಶ ವಿರೋಧಿಸಿ ಬಿ.ಟೆಕ್ ತಾಂತ್ರಿಕ ವಿಭಾಗದ ಪದವಿ ವಿದ್ಯಾರ್ಥಿಗಳು ಹಲವು ದಿನಗಳಿಂದ ಅಹೋರಾತ್ರಿ ಧರಣಿ ಮಾಡುತ್ತಿದ್ದಾರೆ.
ಹಲವು ದಿನಗಳಿಂದ ಹೋರಾಟ ನಡೆಸುತ್ತಿದ್ದರೂ ಸರ್ಕಾರ ಸ್ಪಂದಿಸದೆ ಇರುವುದರಿಂದ ಇಂದು ನೂರಾರು ವಿದ್ಯಾರ್ಥಿಗಳು ಮುಖಕ್ಕೆ ಮಸಿ ಹಚ್ಚಿಕೊಂಡು, ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಪ್ರತಿಭಟನೆ ತೀವ್ರಗೊಳಿಸಿದ್ದಾರೆ. ಕೂಡಲೇ ಸರ್ಕಾರ ಮೊದಲಿಗೆ ಕೃಷಿ ಇಂಜಿನಿಯರಿಂಗ್ ಬಿ.ಟೆಕ್ ಪದವಿ ವಿದ್ಯಾರ್ಥಿಗಳಿಗೆ ಎಒ ಹಾಗೂ ಎಎಒ ಹುದ್ದೆಗಳಿಗೆ ಶೇ.15ರಷ್ಟು ಮೀಸಲಾತಿ ನೀಡಬೇಕು. ದೇಶದ ಬೇರೆ ಬೇರೆ ರಾಜ್ಯದಲ್ಲಿ ಕೃಷಿ ತಾಂತ್ರಿಕ ನಿರ್ದೇಶನಾಲಯವಿದ್ದಂತೆ, ಅದೇ ಮಾದರಿಯಲ್ಲಿ ರಾಜ್ಯದಲ್ಲಿಯೂ ಸಹ ಕೃಷಿ ತಾಂತ್ರಿಕ ನಿರ್ದೇಶನಾಲಯ ಮಾಡಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ:ಪಂಚಮಸಾಲಿ ಲಿಂಗಾಯತ ಮೀಸಲಾತಿ ಮಧ್ಯಂತರ ವರದಿಯನ್ನು ಹೈಕೋರ್ಟ್ಗೆ ಸಲ್ಲಿಸಿದ ಸರ್ಕಾರ