ರಾಯಚೂರು: ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ಆನ್‌ಲೈನ್ ಮೂಲಕ ಪರೀಕ್ಷೆ ನಡೆಸಲು ಅಗತ್ಯ ಸಿದ್ಧತೆ ಮಾಡಿಕೊಂಡಿದೆ. ಬರುವ ಆ.14 ರಿಂದ ಆನ್‌ಲೈನ್‌ನಲ್ಲಿ ಪರೀಕ್ಷೆಗಳನ್ನು ನಡೆಸಲು ತಯಾರಿ ನಡೆಸಿದೆ.
ಮೊದಲ, ಎರಡನೇ, ಮೂರನೇ ವರ್ಷದ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಲಾಗುವುದು. ಕೃಷಿ ವಿವಿ ವ್ಯಾಪ್ತಿಗೆ ಬರುವ ಕಾಲೇಜುಗಳಲ್ಲಿನ ಬಿ.ಟೆಕ್, ಎಂಎಸ್ಸಿ ಅಗ್ರಿ, ಬಿಎಸ್ಸಿ ಅಗ್ರಿ, ಪಿಎಚ್‌ಡಿ ಮತ್ತು ಡಿಪ್ಲೋಮಾ ಅಭ್ಯಾಸ ಮಾಡುತ್ತಿರುವ 1,200 ವಿದ್ಯಾರ್ಥಿಗಳಿಗೆ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ.
ಆನ್‌ಲೈನ್ ಮೂಲಕ ಪರೀಕ್ಷೆ ನಡೆಸಲು ಕೃಷಿ ವಿವಿ ಸಜ್ಜು ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಪರೀಕ್ಷೆಗಳು ಮಾತ್ರ ಇರುವುದರಿಂದ ಪರೀಕ್ಷೆಗಳನ್ನು ನಡೆಸಲಾಗುತ್ತಿಲ್ಲ. ಆನ್‌ಲೈನ್‌ನಲ್ಲಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳನ್ನು ಕಾಲೇಜಿನಲ್ಲಿಯೇ ಕುಳಿತಲ್ಲೇ ನೋಡಬಹುದಾದ ವ್ಯವಸ್ಥೆ ಮಾಡಲಾಗಿದೆ. ಇದರ ಭಾಗವಾಗಿ ಉಪನ್ಯಾಸಕರಿಗೆ ತರಬೇತಿ ನೀಡಿ, ಪ್ರಾಯೋಗಿಕವಾಗಿ ಪರಿಶೀಲನೆ ನಡೆಸುವ ಮೂಲಕ ವಿದ್ಯಾರ್ಥಿಗಳಿಗೂ ಪರೀಕ್ಷೆ ಹೇಗೆ ನಡೆಯಲಿದೆ ಎನ್ನುವ ಕುರಿತಂತೆ ಮಾಹಿತಿಯನ್ನು ಸಹ ರವಾನಿಸಲಾಗಿದೆ.
50 ಅಂಕಗಳಿಗೆ ಮಾತ್ರ ಪರೀಕ್ಷೆ ನಡೆಸಲಾಗುವುದು. ಇನ್ನುಳಿದ 50 ಅಂಕಗಳನ್ನ ಹಿಂದಿನ ಸೆಮಿಸ್ಟರ್ ಅಂಕಗಳ ಸರಾಸರಿಯಲ್ಲಿ ನೀಡಲು ನಿರ್ಧಾರಿಸಲಾಗಿದೆ. 35 ಅಂಕಗಳಿಗೆ ವಿದ್ಯಾರ್ಥಿಗಳು ಉತ್ತರ ಬರೆಯಬೇಕಾಗಿದೆ. 5 ಅಂಕಗಳನ್ನು ಹಾಜರಾತಿ ಆಧಾರದ ಮೇಲೆ ಹಾಗೂ 10 ಅಂಕಗಳನ್ನು ಅಸೈನ್‌ಮೆಂಟ್ ಆಧರಿಸಿ ನೀಡಲಾಗುವುದು. ವಿವಿ ವ್ಯಾಪ್ತಿಗೆ ಬರುವ ಕಲಬುರಗಿ, ಭೀಮರಾಯನಗುಡಿ ಹಾಗೂ ರಾಯಚೂರಿನ ಕ್ಯಾಂಪಸ್‌ನಲ್ಲಿ ಏಕಕಾಲಕ್ಕೆ ಪರೀಕ್ಷೆ ಆರಂಭಿಸಿ, ಆ.29 ರೊಳಗೆ ಪರೀಕ್ಷೆಯನ್ನ ಮುಗಿಸುವ ಯೋಜನೆ ರೂಪಿಸಲಾಗಿದೆ.
ಪರೀಕ್ಷೆ ನಡೆಯುವ ವೇಳೆ ವಿದ್ಯಾರ್ಥಿಗಳಿಗೆ ನೆಟ್‌ವರ್ಕ್ ಸಮಸ್ಯೆ ತಲೆದೋರದಂತೆ ನೆಟ್‌ವರ್ಕ್ ಇರುವ ಸ್ಥಳದಲ್ಲಿ ಪರೀಕ್ಷೆ ಬರೆಯಲು ಸೂಚಿಸಲಾಗಿದೆ. ವಿದ್ಯಾರ್ಥಿಗಳಿಗೆ ಐದು ನಿಮಿಷಗಳ ಮೊದಲು ಪ್ರಶ್ನೆ ಪತ್ರಿಕೆಯನ್ನು ರವಾನಿಸಿ, ವಿದ್ಯಾರ್ಥಿಗಳು ಗೆರೆಯಿರುವ ಪೇಪರ್‌ನಲ್ಲಿ ಒಂದೂವರೆಗೆ ಗಂಟೆಗಳಲ್ಲಿ ಉತ್ತರಿಸಬೇಕು. ಬಳಿಕ 10 ನಿಮಿಷಗಳಲ್ಲಿ ವಾಟ್ಸ್ಆ್ಯಪ್ ಇಲ್ಲವೇ ಇ-ಮೇಲ್ ಮೂಲಕ ಉಪನ್ಯಾಸಕರಿಗೆ ಕಳುಹಿಸಬೇಕು. ಪ್ರಾಕ್ಟಿಕಲ್‌ಗೆ ಸಂಬಂಧಿಸಿದ ವಿಷಯವನ್ನು ವಿದ್ಯಾರ್ಥಿಗಳು ಕೈಯಿಂದಲೇ ಬರೆದು ಕಳುಹಿಸಬೇಕಾಗಿದೆ. ಜತೆಗೆ ಬರುವ ಶೈಕ್ಷಣಿಕ ವರ್ಷದಿಂದ ಆನ್‌ಲೈನ್ ಕ್ಲಾಸ್‌ಗೂ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಆನ್‌ಲೈನ್ ಇಲ್ಲವೇ ಆಫ್ಲೈನ್ನಲ್ಲಿ ತರಗತಿ ಪ್ರಾರಂಭಿಸಲು ವಿವಿ ತಯಾರಿ ಮಾಡಿಕೊಳ್ಳಲಾಗಿದ್ದು, ಸರ್ಕಾರದ ಅನುಮತಿಗಾಗಿ ಕಾಯಲಾಗುತ್ತಿದೆ. ಕ್ಲಾಸ್ ನಡೆಸಲು ಸಿಸ್ಕೋ ಟ್ರೇನಿಂಗ್ ಸಾಫ್ಟ್ವೇರ್ ಖರೀದಿ ಪ್ರಕ್ರಿಯೆ ನಡೆಯುತ್ತಿದ್ದು, ಎಲ್ಲ ಕೃಷಿ ವಿವಿಗಳ ಮುಖ್ಯಸ್ಥರು ಈ ಬಗ್ಗೆ ಆನ್‌ಲೈನ್‌ನಲ್ಲಿ ಚರ್ಚಿಸಿ ನಿರ್ಧರಿಸಲು ತೀರ್ಮಾನಿಸಲಾಗಿದೆ.