ರಾಯಚೂರು: ಸೆ. 1ರಂದು ಜಿಲ್ಲೆಯ ಸಿರವಾರ ತಾಲೂಕಿನ ನವಲಕಲ್-ಹಟ್ಟಿ ರಸ್ತೆ ಬಳಿ ಇತ್ತೀಚಿಗೆ ಟಾಟಾ ಏಸ್ ಪಲ್ಟಿಯಾಗಿ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ 35ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಗಾಯಗೊಂಡಿದ್ದು, ನಿರ್ಲಕ್ಷ್ಯದ ಕಾರಣ ಪ್ರಾಂಶುಪಾಲ ಹಾಗೂ ಶಿಕ್ಷಕರನ್ನು ಅಮಾನತುಗೊಳಿಸಲಾಗಿದೆ.
ವಿದ್ಯಾರ್ಥಿನಿಯರಿದ್ದ ವಾಹನ ಅಪಘಾತ ಪ್ರಕರಣ: ಪ್ರಾಂಶುಪಾಲ, ಶಿಕ್ಷಕ ಅಮಾನತು
ಸೆ. 1ರಂದು ಜಿಲ್ಲೆಯ ಸಿರವಾರ ತಾಲೂಕಿನ ನವಲಕಲ್-ಹಟ್ಟಿ ರಸ್ತೆ ಬಳಿ ಟಾಟಾ ಏಸ್ ಪಲ್ಟಿ ಆಗಿ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ 35ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಗಾಯಗೊಂಡಿದ್ದು, ನಿರ್ಲಕ್ಷ್ಯದ ಕಾರಣ ಪ್ರಾಂಶುಪಾಲ ಹಾಗೂ ಶಿಕ್ಷಕರನ್ನು ಅಮಾನತುಗೊಳಿಸಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯಲೋಪ ಹಾಗೂ ನಿರ್ಲಕ್ಷ್ಯದ ಆರೊಪದ ಮೇರೆಗೆ ವಸತಿ ಶಾಲೆಯ ಪ್ರಾಂಶುಪಾಲ ಹೇಮಣ್ಣ ಹಾದಿಮನಿ ಹಾಗೂ ದೈ.ಶಿ.ಸಂತೋಷ, ಬಿ.ಮಡೆದಾರ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ. ವಸತಿ ಶಾಲೆಯ ಕ್ರೀಡಾ ಹಾಗೂ ಸಾಂಸ್ಕೃತಿಕ ವೆಚ್ಚಕ್ಕಾಗಿ ವಾರ್ಷಿಕ 20 ಸಾವಿರ ರೂ. ಬಿಡುಗಡೆಯಾದ್ರೂ ಸಹ ಸುರಕ್ಷಿತವಾಗಿ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗುವ ಬದಲು ಗೂಡ್ಸ್ ವಾಹನದಲ್ಲಿ ಕರೆದುಕೊಂಡು ಹೋಗಿ ಅಪಘಾತಕ್ಕೆ ಕಾರಣರಾಗಿದ್ದಾರೆಂಬ ಆರೋಪದ ಮೇರೆಗೆ ಕ.ಅ.ಸೇ ಕಾರ್ಯನಿರ್ವಾಹಕ ನಿರ್ದೇಶಕ ರಾಘವೇಂದ್ರ, ವಸತಿ ಶಾಲೆಯ ಪ್ರಾಚಾರ್ಯ ಹಾಗೂ ದೈ.ಶಿಕ್ಷಕರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಆ. 29 ರಂದು ಸಿರವಾರ ತಾಲೂಕಿನ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ವಿದ್ಯಾರ್ಥಿನಿಯರನ್ನು ತಾಲೂಕು ಮಟ್ಟದ ಕ್ರೀಡಾಕೂಟದ ಅಂಗವಾಗಿ ಕುರಕುಂದಾ ಗ್ರಾಮಕ್ಕೆ ಟಾಟಾ ಏಸ್ನಲ್ಲಿ ಕರೆದುಕೊಂಡು ಹೋಗಿ, ವಾಪಸ್ಸಾಗುವ ವೇಳೆ ಟಾಟಾ ಏಸ್ ಪಲ್ಟಿ ಆಗಿ 35ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಗಾಯಗೊಂಡಿದ್ದರು. ನಂತರ, ವಿದ್ಯಾರ್ಥಿನಿಯರನ್ನು ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿಸಲಾಗಿತ್ತು. ಈ ಪೈಕಿ 5 ಜನ ವಿದ್ಯಾರ್ಥಿನಿಯರು ತೀವ್ರ ಗಾಯಗೊಂಡಿದ್ದು, ಸದ್ಯ ಬಳ್ಳಾರಿ ಹಾಗೂ ಬೆಂಗಳೂರಿಗೆ ರವಾನಿಸಲಾಗಿದೆ.