ರಾಯಚೂರು/ಮೈಸೂರು:ಶ್ರೀರಾಮುಲು ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನಿಡದಿದ್ದಕ್ಕೆ ಬೇಸರಗೊಂಡಿರುವ ಬಿಜೆಪಿ ಎಸ್ಟಿ ಮೋರ್ಚಾ ಅಧ್ಯಕ್ಷರು ಸೇರಿದಂತೆ 25 ಪದಾಧಿಕಾರಿಗಳು ಸಾಮೂಹಿಕ ರಾಜೀನಾಮೆಗೆ ಮುಂದಾಗಿದ್ದಾರೆ.
ರಾಜೀನಾಮೆ ನೀಡಲು ಮುಂದಾದ ರಾಯಚೂರು ಬಿಜೆಪಿ ಪದಾಧಿಕಾರಿಗಳು.. ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ ಅಸಮಾಧಾನ ಭುಗಿಲೆದ್ದಿದ್ದು, ಪಟ್ಟಣದ ವಾಲ್ಮೀಕಿ ವೃತ್ತದಿಂದ ಅಶೋಕ ವೃತ್ತದವರೆಗೆ ಪ್ರತಿಭಟನೆ ಮಾಡುವ ಮೂಲಕ ಎಸ್ಟಿ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷ ರಾಜುಗೌಡ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಲಿದ್ದಾರೆ.
ಇತ್ತ ಮೈಸೂರಿನಲ್ಲೂ ಡಿಸಿಎಂ ಹುದ್ದೆ ಕೊಡದಿದ್ದರೆ ಸಚಿವ ಸ್ಥಾನಕ್ಕೂ ರಾಜೀನಾಮೆ ನೀಡಿ ಎಂದು ಶ್ರೀರಾಮುಲು ಅವರಿಗೆ ನಾಯಕ ಸಮುದಾಯದ ಸದಸ್ಯರು ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿದ್ದಾರೆ.
ನಾಯಕ ಸಮುದಾಯದ ಮುಖಂಡರಿಂದ ಪ್ರತಿಭಟನೆ.. ರಾಜ್ಯದಲ್ಲಿ 60 ಲಕ್ಷ ಜನಸಂಖ್ಯೆ ಹೊಂದಿರುವ ನಾಯಕ ಸಮುದಾಯದ ಮುಖಂಡರಾದ ಶ್ರೀರಾಮಲು ಅವರಿಗೆ ಡಿಸಿಎಂ ಸ್ಥಾನ ನೀಡಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ನಾಯಕ ಹಿತರಕ್ಷಣಾ ವೇದಿಕೆಯ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿದ್ರು. ಈ ಸಂದರ್ಭದಲ್ಲಿ ಈಟಿವಿ ಭಾರತ ಜೊತೆ ಮಾತನಾಡಿದ ರಾಜ್ಯ ನಾಯಕ ಹಿತರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ದ್ಯಾವಪ್ಪ ನಾಯಕ, ಕಳೆದ ವಿಧಾನಸಭಾ ಚುನಾವಣಾ ರ‍್ಯಾಲಿ ಸಂದರ್ಭದಲ್ಲಿ ಅಮಿತ್ ಶಾ ಅವರು ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ, ಶ್ರೀರಾಮುಲು ಅವರನ್ನು ಡಿಸಿಎಂ ಮಾಡುತ್ತೇವೆ ಎಂದು ಹೇಳಿದ್ದರು.
ಆದರೆ, ಈಗ ಡಿಸಿಎಂ ಹುದ್ದೆ ಕೈತಪ್ಪಿದೆ. ಈ ಮೂಲಕ ಪ್ರಬಲ ಸಮುದಾಯದ ಮುಖಂಡರನ್ನು ರಾಜಕೀಯವಾಗಿ ಮುಗಿಸುವ ಕುತಂತ್ರ ನಡೆದಿದೆ ಎಂಬ ಆತಂಕ ನಮ್ಮಲ್ಲಿ ಇದೆ. ಕೂಡಲೇ ಡಿಸಿಎಂ ಸ್ಥಾನ ಕೊಡಬೇಕು. ಇಲ್ಲದಿದ್ದರೆ ಶ್ರೀರಾಮುಲು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಶಾಸಕರಾಗಿ ಮುಂದುವರೆಯಲಿ ಎಂದು ಆಗ್ರಹಿಸಿದ್ದಾರೆ.