ರಾಯಚೂರು: ಉಕ್ಕಿ ಹರಿಯುತ್ತಿರುವ ಹಳ್ಳದಲ್ಲಿ ಕೆಲ ಯುವಕರು ತಮ್ಮ ಧೈರ್ಯ ಪ್ರದರ್ಶನ ಮಾಡುವ ಹುಮ್ಮಸ್ಸಿನಲ್ಲಿ ತಮ್ಮ ಪ್ರಾಣದೊಂದಿಗೆ ಚೆಲ್ಲಾಟವಾಡಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ರಾಯಚೂರು ತಾಲೂಕಿನ ಯರಗೇರಾ-ಪುಚ್ಚಲದಿನ್ನಿ ಸಂಪರ್ಕ ರಸ್ತೆ ಮಾರ್ಗದ ನಡುವೆ ಹಳ್ಳ ಹರಿಯುತ್ತಿದೆ. ಹರಿಯುವ ನೀರಿನಲ್ಲಿ ಕೆಲವರು ನಿಂತುಕೊಂಡು ಧೈರ್ಯ ಪ್ರದರ್ಶನ ಮಾಡಿದ್ದಾರೆ. ನಾಲ್ವರು ಹರಿಯುವ ನೀರಿನಲ್ಲಿ ನಿಲ್ಲುವಂತಹ ಸಾಹಸಕ್ಕೆ ಮುಂದಾಗಿದ್ದಾರೆ. ಈ ವೇಳೆ ಓರ್ವ ನೀರಿನಲ್ಲಿ ಈಜಿ ದಡ ಸೇರಿದ್ದಾನೆ. ಇನ್ನುಳಿದವರು ತಮ್ಮ ಪ್ರಾಣವನ್ನು ಲೆಕ್ಕಿಸದೆ ಹಾಗೆಯೇ ಹಳ್ಳದ ನೀರಿನಲ್ಲಿ ನಿಂತಿರುವ ದೃಶ್ಯ ಕಂಡು ಬಂದಿದೆ.
ಹರಿಯುವ ನೀರಿನಲ್ಲಿ ನಿಂತು ದುಸ್ಸಾಹಸ ಅಲ್ಲದೆ ಕೆಲವರು ಇದೇ ನೀರಿನಲ್ಲಿ ಬೈಕ್ ದಾಟಿಸಲು ಮುಂದಾಗಿದ್ದಾರೆ. ಬೈಕ್ ನೀರುಪಾಲಾಗಿದೆ ಎನ್ನಲಾಗುತ್ತಿದ್ದು, ಅದೃಷ್ಟವಶಾತ್ ಯಾವುದೇ ಜೀವಹಾನಿ ಸಂಭವಿಸಿಲ್ಲ. ಯುವಕರು ನೀರಿನಲ್ಲಿ ಮಾಡುತ್ತಿರುವ ದುಸ್ಸಾಹಸವನ್ನು ಕೆಲವರು ಮೊಬೈಲ್ನಲ್ಲಿ ಚಿತ್ರೀಕರಿಸಿದ್ದು, ಗ್ರಾಮಸ್ಥರು ನಿಂತು ನೋಡುತ್ತಿರುವ ದೃಶ್ಯ ಕಂಡು ಬಂದಿದೆ.
ಹಳ್ಳದಲ್ಲಿ ಎತ್ತಿನಬಂಡಿ:ಹೊಲಕ್ಕೆ ಗೊಬ್ಬರ ಹಾಕಲು ಬಂಡಿಯಿಂದ ಹಳ್ಳ ದಾಟುವ ವೇಳೆ ಎತ್ತುಗಳ ಸಮೇತವಾಗಿ ಎತ್ತಿನಬಂಡಿ ಕೊಚ್ಚಿಕೊಂಡು ಹೋಗಿದೆ. ಈ ವೇಳೆ ಸ್ಥಳೀಯರು ರಕ್ಷಣೆ ಮಾಡಿದ್ದಾರೆ. ಯರಗೇರಾ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.