ರಾಯಚೂರು:ಸಂಬಳ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ ನಗರದಲ್ಲಿ ಇಂದು ಎಂಜಿನಿಯರಿಂಗ್ ಕಾಲೇಜಿನ ಅತಿಥಿ ಉಪನ್ಯಾಸಕರು ಪ್ರತಿಭಟನೆ ನಡೆಸಿದರು. ನಗರದ ಹೊರವಲಯದ ಯರಮರಸ್ ಕ್ಯಾಂಪ್ನ ಸರ್ಕಾರಿ ಎಂಜಿನಿಯರಿಂಗ್ ಮಹಾವಿದ್ಯಾಲಯದ ಎದುರು ತರಗತಿಗಳನ್ನು ಬಹಿಷ್ಕರಿಸುವ ಮೂಲಕ ಕಾಲೇಜಿನ ಎಲ್ಲ ಅತಿಥಿ ಉಪನ್ಯಾಸಕರು ಅನಿರ್ದಿಷ್ಟಾವಧಿ ಪ್ರತಿಭಟನೆ ಆರಂಭಿಸಿದರು.
ಸೇವೆಗೆ ತಕ್ಕಂತೆ ಸಂಬಳ ಸಿಗುತ್ತಿಲ್ಲ:ಅರೆಕಾಲಿಕ ಅತಿಥಿ ಉಪನ್ಯಾಸಕರಾಗಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದರೂ ನಮಗೆ ಸೇವೆಗೆ ತಕ್ಕಂತೆ ವೇತನ ಸಿಗುತ್ತಿಲ್ಲ ಬದಲಾಗಿ 15 ಸಾವಿರ ರೂಪಾಯಿಯನ್ನು ನೀಡಲಾಗುತ್ತಿದೆ. ಅಲ್ಲದೇ ಈ ಸೇವೆಯ ವರ್ಷ ಪೂರ್ತಿ ತೆಗೆದುಕೊಳ್ಳದೇ 8 ತಿಂಗಳ ಅವಧಿ ವರೆಗೆ ಮಾತ್ರ ಕೆಲಸಕ್ಕೆ ತೆಗೆದುಕೊಳ್ಳುತ್ತಿದ್ದಾರೆ. ಆದರೆ, ಈಗ ಶಾಲಾ - ಕಾಲೇಜು ಅತಿಥಿ ಉಪನ್ಯಾಸಕ ವೇತನ ಪರಿಷ್ಕರಿಸಲಾಗಿದೆ. ನಮಗೆ ಕೇವಲ 15 ಸಾವಿರ ರೂಪಾಯಿ ಸರ್ಕಾರ ವೇತನ ನೀಡುತ್ತಿದೆ ಎಂದು ಅತಿಥಿ ಉಪನ್ಯಾಸಕರು ಆರೋಪಿಸಿದರು.
ರಾಜ್ಯಾದ್ಯಂತ ಒಟ್ಟು 16 ಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಸುಮಾರು 280 ಜನ ಅರೆಕಾಲಿಕ ಅತಿಥಿ ಉಪನ್ಯಾಸಕರು ಕರ್ತವ್ಯ ನಿರ್ವಹಿಸುತ್ತಿದ್ದೇವೆ. ರಾಯಚೂರು ಯರಮರಸ್ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ 23 ಜನ ಅತಿಥಿ ಉಪನ್ಯಾಸಕರಾಗಿ ಕೆಲಸ ಮಾಡುತ್ತಿದ್ದೇವೆ. ಆದರೆ ನಮ್ಮ ಸೇವೆಗೆ ಇದುವರೆಗೂ ಸಹ ಕನಿಷ್ಠ ಸಂಬಳ ಸಿಗುತ್ತಿಲ್ಲ ಎಂದು ಅತಿಥಿ ಉಪನ್ಯಾಸಕರು ಆಪಾದಿಸಿದರು.