ರಾಯಚೂರು:ಕಾರ್ಖಾನೆಗಳಿಂದ ಮಾನವನ ಮೇಲೆ ಹಾಗೂ ಸುತ್ತಮುತ್ತಲಿನ ಪರಿಸರ ಮೇಲೆ ಆಗುತ್ತಿರುವ ದುಷ್ಪರಿಣಾಮಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರಕಾರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಅನೇಕ ಮುನ್ನೆಚ್ಚರಿಕಾ ಕ್ರಮ ಹಾಗು ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದೆ. ಆದ್ರೆ ರಾಯಚೂರು ತಾಲೂಕಿನ ದೇವಸುಗೂರಿನ ಮೆ. ಶಿಲ್ಪ ಮೆಡಿಕೇರ್ ಲಿಮಿಟೆಡ್ ಯುನಿಟ್ -1 ಇದಾವುದನ್ನು ಲೆಕ್ಕಿಸದೇ ಕಾನೂನು ಉಲ್ಲಂಘನೆ ಮಾಡಿ ಕೆಲಸ ನಿರ್ವಹಿಸುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.
ರಾಯಚೂರು ತಾಲೂಕಿನ ದೇವಸುಗೂರು ಇಂಡಸ್ಟ್ರಿಯಲ್ ಏರಿಯಾದಲ್ಲಿ ಡ್ರಗ್ಸ್ ತಯಾರಿಸುತ್ತಿರುವ ಮೆ.ಶಿಲ್ಪಾ ಮೆಡಿಕೇರ್ ಲಿಮಿಟೆಡ್ ಯುನಿಟ್- 1 ಕಳೆದ ಹಲವಾರು ವರ್ಷಗಳಿಂದ ಔಷಧಿ ತಯಾರಿಸಲು ಉಪಯೋಗವಾಗುವ ಡ್ರಗ್ ಉತ್ಪಾದನೆ ಮಾಡಿ ಪ್ರತಿಷ್ಟಿತವಾದ ಸಂಸ್ಥೆ ಎಂದು ಗುರುತಿಸಿಕೊಂಡಿದೆ. ಆದ್ರೆ ಈ ಕಂಪನಿ ಈಗ ಕಾನೂನಿನ ಅನುಗುಣವಾಗಿ ನಡೆದುಕೊಳ್ಳದ ಕಾರಣಎನ್ವಿರಾನ್ಮೆಂಟ್ ಪ್ರೊಟೆಕ್ಷನ್ ಆಕ್ಟ್ 1986 ನಿಯಮಗಳನ್ನು ಉಲ್ಲಂಘನೆ ಮಾಡಿದ್ದಲ್ಲದೇ 30-6-2016 ಕ್ಕೆ ಡ್ರಗ್ ಉತ್ಪಾದನೆ ಮಾಡಲು ನೀಡಲಾದ ಅನುಮತಿ ಅವಧಿ ಮುಗಿದರೂ ಇಲ್ಲಿಯವರೆಗೆ ಅಕ್ರಮವಾಗಿ ನಿರಂತರ ಡ್ರಗ್ ಉತ್ಪಾದನೆ ಮಾಡುತ್ತಿದೆ.
ಅಲ್ಲದೆ ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಿಗೆ ಸದರಿ ಕಂಪನಿಗೆ ನೀಡಲಾದ ವಿದ್ಯುತ್ ಸರಬರಾಜು ಸ್ಥಗಿತಗೊಳಿಸುವಂತೆ ಸೂಚಿಸಿದ್ದಾರೆ. ಆದರೆ ಇದ್ಯಾವುದೇ ಕ್ರಮ ಜರುಗಿಸದೇ ಜಿಲ್ಲಾಡಳಿತ ನಿರ್ಲಕ್ಷ್ಯ ವಹಿಸಿದೆ. ವಿಚಿತ್ರವೆಂದರೆ ಸದರಿ ಕಂಪನಿಗೆ ನೀಡಿದ ಆದೇಶದ ಪತ್ರ ಜಿಲ್ಲಾಡಳಿತದ ಇನ್ ವಾರ್ಡ್ಗೆ ಬಂದಿಲ್ಲ. ಇದು ಬಾರೀ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
ಕಳೆದ 25 ವರ್ಷಗಳಿಂದ ರಾಸಾಯನಿಕ ಉತ್ಪನ್ನ ಉತ್ಪಾದನೆ ಮಾಡುತ್ತಿರುವ ಶಿಲ್ಪ ಮೆಡಿಕೇರ್ ಕಂಪನಿ 30 ಕೆಮಿಕಲ್ ಉತ್ಪಾದನೆಗೆ ಕೇಂದ್ರ ಪರಿಸರ ಮತ್ತು ಅರಣ್ಯ ಮಂತ್ರಾಲಯದಿಂದ ಪಡೆದ ಅನುಮತಿ 2016 ಜೂನ್ಗೆ ಮುಗಿದರೂ ಕಾಲಾವಧಿ ವಿಸ್ತರಣೆಗೆ ಮರು ಅನುಮತಿಗೆ ಪರವಾನಗಿ ಪಡೆಯದೇ ನಿರ್ವಹಣೆ ಮಾಡುತ್ತಿದೆ. ಈ ಬಗ್ಗೆ ಹೈದ್ರಾಬಾದ್ ಕರ್ನಾಟಕ ಹೋರಾಟ ಸಮಿತಿಯ ಸಂಚಾಲಕರಾದ ಡಾ.ರಜಾಕ್ ಉಸ್ತಾದ್ ಅವರು ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಲಾದ ಮಾಹಿತಿಯಲ್ಲಿ ಬಹಿರಂಗವಾಗಿದ್ದು, ಈ ಕೂಡಲೇ ಕಾನೂನು ಉಲ್ಲಂಘನೆ ಮಾಡಿ ಪರಿಸರದ ಮೇಲೆ ದುಷ್ಪರಿಣಾಮಕ್ಕೆ ಕಾರಣವಾದ ಈ ಕಾರ್ಖಾನೆಯನ್ನು ಸೀಜ್ ಮಾಡಿ ಕಂಪನಿಯ ಆಡಳಿತದ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಹಾಗೂ 2016ರಿಂದ ಇಲ್ಲಿಯವರೆಗೆ ಕಂಪನಿಗಳಿಸಿದ ಲಾಭವನ್ನು ವಸೂಲಿ ಮಾಡಿ ಈ ಭಾಗದ ಪರಿಸರ ಸುಧಾರಣೆಗೆ ಬಳಸಬೇಕೆಂದು ಒತ್ತಾಯಿಸಿದ್ದಾರೆ. ಅಲ್ಲದೇ ರಾಸಾಯನಿಕ ಉತ್ಪಾದನೆಯಿಂದ ಹೊರಸೂಸುವ ಕೆಮಿಕಲ್ ನೀರು ಸಂಸ್ಕರಣೆ ಗೆ ವ್ಯವಸ್ಥೆ ಮಾಡಿಲ್ಲ. 19 ಕಿ.ಮೀ ಉತ್ಪಾದನೆಗೆ ಪರವಾನಗಿ ಪಡೆದು 26 ಕಿ.ಮೀ.ಉತ್ಪಾದಿಸುತ್ತಿದೆ ಎಂದು ರಜಾಕ್ ಉಸ್ತಾದ್ ಅವರು ದೂರಿದರು.
ಒಂದು ಕಡೆ ಜಲ ಮಾಲಿನ್ಯ, ವಾಯುಮಾಲಿನ್ಯಕ್ಕೆ ಕಾರಣವಾಗಿದ್ದಲ್ಲದೇ ಸುತ್ತಲಿನ ಗ್ರಾಮಗಳ ನಿವಾಸಿಗಳ ಆರೋಗ್ಯದ ಮೇಲೆ ವ್ಯತಿರಿಕ್ತವಾಗಿ ಪರಿಣಾಮ ಬೀರಲು ಕಾರಣವಾಗಿದೆ. ಮತ್ತೊಂದು ಕಡೆ ಅವಧಿ ಮುಗಿದರೂ ನಿರ್ವಹಣೆ ಮಾಡುತ್ತಿರುವ ಕಂಪನಿ ಬಗ್ಗೆ ಜಿಲ್ಲಾಡಳಿತದಿಂದ ಯಾವುದೇ ಕ್ರಮವಾಗುತ್ತಿಲ್ಲ ಇದು ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.