ರಾಯಚೂರು: ನಾರಾಯಣಪುರ (ಬಸವಸಾಗರ) ಜಲಾಶಯದಿಂದ ಲಕ್ಷಾಂತರ ಕ್ಯೂಸೆಕ್ಸ್ ನೀರು ಹರಿಬಿಟ್ಟ ಪರಿಣಾಮ ಜಿಲ್ಲೆಯ ಶೀಲಹಳ್ಳಿ ಸೇತುವೆ ಮುಳುಗಡೆಗೊಂಡಿದೆ.
ರಾಯಚೂರು: ಶೀಲಹಳ್ಳಿ ಸೇತುವೆ ಮುಳುಗಡೆ... ಗ್ರಾಮಗಳ ಸಂಪರ್ಕ ಕಡಿತ - ನಾರಾಯಣಪುರ ಜಲಾಶಯ
ನಾರಾಯಣಪುರ ಜಲಾಶಯದಿಂದ ಲಕ್ಷಾಂತರ ಕ್ಯೂಸೆಕ್ಸ್ ನೀರು ಹರಿಬಿಟ್ಟ ಪರಿಣಾಮ ರಾಯಚೂರು ಜಿಲ್ಲೆಯ ಶೀಲಹಳ್ಳಿ ಸೇತುವೆ ಮುಳುಗಡೆಗೊಂಡಿದೆ. ಇದರಿಂದ ಕೆಲ ಗ್ರಾಮಗಳ ಸಂಚಾರಕ್ಕೆ ಅಡ್ಡಿಯುಂಟಾಗಿದೆ.
ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಐದಾರು ಹಳ್ಳಿಗೆ ಸಂಚಾರ ಕಲ್ಪಿಸುವ ಶೀಲಹಳ್ಳಿ-ಹಂಚಿನಾಳ ಗ್ರಾಮಗಳ ಮಧ್ಯೆ ಸೇತುವೆ ನಿರ್ಮಾಣ ಮಾಡಲಾಗಿತ್ತು. ಆದರೆ ಮಹಾರಾಷ್ಟ್ರದಲ್ಲಿ ಸುರಿದ ಭಾರಿ ಮಳೆಯಿಂದಾಗಿ ಕೃಷ್ಣ ನದಿ ಉಕ್ಕಿ ಹರಿಯುತ್ತಿದೆ. ಹೀಗಾಗಿ ನಾರಾಯಣಪುರ ಜಲಾಶಯಕ್ಕೆ ಅಪಾರ ಪ್ರಮಾಣದ ನೀರು ಬರುತ್ತಿರುವುದರಿಂದ ಇಂದು 1,63,000 ಕ್ಯೂಸೆಕ್ಸ್ ನೀರನ್ನು ನದಿಗೆ ಹರಿದು ಬಿಡಲಾಗಿದೆ. ಇದರಿಂದ ಶೀಲಹಳ್ಳಿ ಸೇತುವೆ ಮುಳುಗಡೆಯಾಗಿ ಹಂಚಿನಾಳ, ಜಲದುರ್ಗ, ಎಳಗೊಂದಿ, ಯರಗೋಡಿ, ಕಡದರಗಡಿ ಗ್ರಾಮಸ್ಥರ ಸಂಚಾರಕ್ಕೆ ಅಡಚಣೆ ಉಂಟಾಗಿದೆ.
ಸದ್ಯ ಸೇತುವೆ ಮುಳುಗಡೆಗೊಂಡಿದ್ದು, ಇಲ್ಲಿ ಸಂಚಾರ ಸ್ಥಗಿತಗೊಳಿಸಲಾಗಿದೆ. ಸ್ಥಳದಲ್ಲಿ ತಹಶೀಲ್ದಾರ್ ಸೇರಿದಂತೆ ಅಧಿಕಾರಿಗಳು, ಸಿಬ್ಬಂದಿ ಬೀಡುಬಿಟ್ಟಿದ್ದಾರೆ. ಅಲ್ಲದೇ ನಡುಗಡ್ಡೆ ಪ್ರದೇಶದ ನಿವಾಸಿಗಳಿಗೆ ಎಚ್ಚರಿಕೆ ರವಾನಿಸಿದ್ದು, ಜಲಾಶಯದಿಂದ ಇನಷ್ಟು ನೀರು ಹರಿಬಿಟ್ಟರೆ ಪ್ರವಾಹ ಹೆಚ್ಚುವ ಆಗುವ ಸಾಧ್ಯತೆಯಿದೆ.