ರಾಯಚೂರು: ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ಮೀಸಲಾತಿ ಅಂತಿಮಗೊಂಡು ಇತ್ತೀಚೆಗೆ ಸರ್ಕಾರದಿಂದ ಆದೇಶ ಹೊರ ಬಿದ್ದಿದ್ದೆ ತಡ, ರಾಯಚೂರು ನಗರಸಭೆ ಅಧಿಕಾರ ಚುಕ್ಕಾಣಿ ಹಿಡಿಯಲು ಕೈ- ಕಮಲ ಪಕ್ಷಗಳು ಭಾರಿ ಸೆಣಸಾಟ ನಡೆಸುತ್ತಿದೆ.
ರಾಯಚೂರು ನಗರಸಭೆ ಅಧ್ಯಕ್ಷ ಸ್ಥಾನ ಬಿಸಿಎಗೆ ಹಾಗೂ ಉಪಾಧ್ಯಕ್ಷ ಸ್ಥಾನ ಎಸ್ಸಿ(ಪರಿಶಿಷ್ಟ ಜಾತಿ) ಮಹಿಳೆಗೆ ಮೀಸಲಿಡಲಾಗಿದೆ. ಒಟ್ಟು 35 ಸದಸ್ಯ ಬಲ ಹೊಂದಿರುವ ನಗರಸಭೆಯಲ್ಲಿ ಬಿಜೆಪಿ 12, ಕಾಂಗ್ರೆಸ್ 11, ಪಕ್ಷೇತರರು 9 ಹಾಗೂ ಜೆಡಿಎಸ್ನ 3 ಸದಸ್ಯರ ಬಲವಿದ್ದು, ಈ ಪೈಕಿ ಸದಸ್ಯರೊಬ್ಬರು ಸಾವನ್ನಪ್ಪಿದ್ದಾರೆ. ಸಂಸದ, ಕ್ಷೇತ್ರದ ಶಾಸಕ ಹಾಗೂ ವಿಧಾನ ಪರಿಷತ್ ಸದಸ್ಯರಿಗೆ ಮತದಾನದ ಹಕ್ಕು ಇರುವುದರಿಂದ ಅಧಿಕಾರ ಹಿಡಿಯಲು 18 ಸದಸ್ಯರ ಬಲ ಬೇಕಾಗಲಿದೆ. 9 ಜನ ಪಕ್ಷೇತರರಲ್ಲಿ ನಾಲ್ವರು ಮೂಲತಃ ಕಾಂಗ್ರೆಸ್ನವರಾಗಿದ್ದಾರೆ. ಯಾರಿಗೂ ಬಹುಮತ ಇಲ್ಲದ ಕಾರಣ ಪಕ್ಷೇತರರ ಬೆಂಬಲದೊಂದಿಗೆ ಅಧಿಕಾರ ಹಿಡಿಯಲು ಕಸರತ್ತು ನಡೆಸಲಾಗುತ್ತಿದೆ.
ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ನ ಇ.ವಿನಯಕುಮಾರ, ಜಿಂದಪ್ಪ, ಪಕ್ಷೇತರ ಸಾಜೀದ್ ಸಮೀರ್ ತೀವ್ರ ಪೈಪೋಟಿ ನಡೆಸಿದ್ದಾರೆ. ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ ಲಲಿತಾ ಕಡಗೋಲ, ಉಮಾ ಜಲ್ದಾರ್, ಕಾಂಗ್ರೆಸ್ನ ನರಸಮ್ಮ ಮಾಡಗಿರಿ, ಪಕ್ಷೇತರರಾದ ಹೇಮಲತಾ ಬೂದೆಪ್ಪ, ರೇಣಪ್ಪ ಮಧ್ಯೆ ತೀವ್ರ ಜಿದ್ದಾಜಿದ್ದಿ ನಡೆದಿದೆ. ಇ.ವಿಜಯಕುಮಾರ ಪಕ್ಷೇತರರ ಬೆಂಬಲದೊಂದಿಗೆ ಅಧಿಕಾರ ಹಿಡಿಯುವ ಕಸರತ್ತು ನಡೆಸಿದ್ರೆ, ಉಪಾಧ್ಯಕ್ಷ ಸ್ಥಾನಕ್ಕೆ ಉಮಾ ಜಲ್ದಾರ್, ಲಲಿತಾ ಕಡಗೋಲ, ಹೇಮಲತಾ ಬೂದೆಪ್ಪ ಮೂವರಲ್ಲಿ ಒಬ್ಬರು ಆಯ್ಕೆಯಾಗುವ ಸಾಧ್ಯತೆಯಿದೆ.
ರಾಯಚೂರು ನಗರಸಭೆಗೆ ಸ್ಪಷ್ಟ ಬಹುಮತವಿಲ್ಲದ ಕಾರಣ ಕಾಂಗ್ರೆಸ್, ಬಿಜೆಪಿ ಅಧಿಕಾರ ಚುಕ್ಕಾಣಿ ಹಿಡಿಯಲು ಭಾರಿ ಕಸರತ್ತು ನಡೆಸುವ ಮೂಲಕ ಸದಸ್ಯರೊಂದಿಗೆ ಮಾತುಕತೆಗಳು ನಡೆಯುತ್ತಿವೆ ಎನ್ನಲಾಗುತ್ತಿದೆ. ಸದ್ಯ ಹೆಚ್ಚು ಸದಸ್ಯ ಬಲ ಹೊಂದಿರುವ ಬಿಜೆಪಿ, ಸ್ಥಳೀಯ ಶಾಸಕರು, ಸಂಸದರಿಂದ ಎರಡು ಸದಸ್ಯ ಬಲದಿಂದ ಏರಿಕೆಯಾದರೂ ಅಧಿಕಾರ ಗದ್ದುಗೆ ಏರಲು ಸಾಧ್ಯವಿಲ್ಲ. ಹೀಗಾಗಿ ಪಕ್ಷೇತರ ಅಭ್ಯರ್ಥಿಗಳು ಹಾಗೂ ಜೆಡಿಎಸ್ ಸದಸ್ಯರ ಬಲ ಬೇಕಾಗಿದೆ. ಅಲ್ಲದೇ ಕಾಂಗ್ರೆಸ್ ಜೆಡಿಎಸ್ ಹಾಗೂ ಪಕ್ಷೇತರ ಬಲದೊಂದಿಗೆ ಅಧಿಕಾರ ಚುಕ್ಕಾಣಿ ಹಿಡಿಯಲು ಅವಕಾಶವಿದೆ. ಆದ್ರೆ ಸ್ಥಳೀಯ ರಾಜಕೀಯ ಮೇಲಾಟದಲ್ಲಿ ಯಾರು ಅಧಿಕಾರ ಗದ್ದುಗೆ ಹಿಡಿಯುತ್ತಾರೆ ಎನ್ನುವುದು ಕುತೂಹಲ ಕೆರಳಿಸಿದೆ.