ರಾಯಚೂರು:ಮನೆಯಲ್ಲಿ ಅಳವಡಿಸಿದ್ದ ಎಸಿ (ಹವಾನಿಯಂತ್ರಿತ ಯಂತ್ರ) ಸ್ಫೋಟಗೊಂಡು ತಾಯಿ ಮತ್ತು ಇಬ್ಬರು ಮಕ್ಕಳು ಸಾವನ್ನಪ್ಪಿರುವ ಘಟನೆ ರಾಯಚೂರು ತಾಲೂಕಿನ ಶಕ್ತಿನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮೃತರನ್ನು ರಂಜಿತಾ (33), ಮೃದಲ(13), ತಾರುಣ್ಯ(5) ಎಂದು ಗುರುತಿಸಲಾಗಿದೆ. ತಾಯಿ ಮತ್ತು ಮಕ್ಕಳಿಬ್ಬರು ಮನೆಯಲ್ಲಿ ಇರುವಾಗ ಎಸಿ (ಹವಾನಿಯಂತ್ರಿತ ಯಂತ್ರ) ಸ್ಫೋಟಗೊಂಡು ರೂಮ್ನಲ್ಲಿ ಬೆಂಕಿ ಹೊತ್ತಿಕೊಂಡು ಸಜೀವ ದಹನವಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಘಟನಾ ಸ್ಥಳಕ್ಕೆ ರಾಯಚೂರು ಡಿವೈಎಸ್ಪಿ, ಶಕ್ತಿನಗರ ಪಿಎಸ್‌ಐ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ ಮೃತದೇಹಗಳನ್ನು ಶವಾಗಾರಕ್ಕೆ ರವಾನಿಸಲಾಗಿದೆ.
ಇನ್ನೂ, ಮೃತರ ಪತಿ ಸಿದ್ಧಲಿಂಗಯ್ಯ ಹಾಗೂ ಪತ್ನಿ ಮಂಡ್ಯ ಜಿಲ್ಲೆಯ ನಿವಾಸಿಗಳಾಗಿದ್ದು, ಘಟನೆ ಮಾಹಿತಿಯನ್ನು ಮೃತ ರಂಜಿತಾ ಕುಟುಂಬಕ್ಕೆ ರವಾನಿಸಲಾಗಿದೆ. ಘಟನೆ ಸಂಬಂಧಿಸಿದಂತೆ ಯಾವುದೇ ಪ್ರಕರಣ ದಾಖಲಾಗಿಲ್ಲ. ರಂಜಿತಾ ಕುಟುಂಬದವರು ಬಂದ ಬಳಿಕ ಅವರು ನೀಡುವ ದೂರಿನ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ :ಸೆಕ್ಸ್ ರಾಕೆಟ್ ಭೇದಿಸಿದ ಪೊಲೀಸರು: ವಿದೇಶಿ ಹುಡುಗಿಯರ ರಕ್ಷಣೆ, ನಾಲ್ವರ ಬಂಧನ
ಬೆಂಗಳೂರಿನಲ್ಲಿ ಭಾನುವಾರ ಅಂಗಡಿಯೊಂದರಲ್ಲಿ ಸಿಲಿಂಡರ್ ರಿಫಿಲ್ಲಿಂಗ್ ಮಾಡುತ್ತಿದ್ದ ವೇಳೆ ಉಂಟಾದ ಸ್ಫೋಟದಿಂದ ಬಾಲಕನೊಬ್ಬ ಮೃತಪಟ್ಟಿರುವ ದಾರುಣ ಘಟನೆ ಹೆಬ್ಬಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿತ್ತು. ಹೆಬ್ಬಾಳದ ಗುಡ್ಡದಹಳ್ಳಿಯ ಸಿಲಿಂಡರ್ ಅಂಗಡಿಯೊಂದರಲ್ಲಿ ಸ್ಫೋಟ ಸಂಭವಿಸಿದ್ದು, ಈ ದುರ್ಘಟನೆಯಲ್ಲಿ ಅಂಗಡಿ ಎದುರು ಆಡುತ್ತಿದ್ದ 13 ವರ್ಷದ ಮಹೇಶ್ ಎಂಬ ಬಾಲಕ ಬಲಿಯಾಗಿದ್ದ.