ರಾಯಚೂರು: ಜಿಲ್ಲೆಯನ್ನು ಬೆಚ್ಚಿಬೀಳಿಸಿದ್ದ ತ್ರಿವಳಿ ಕೊಲೆ ಪ್ರಕರಣ(Triple Murder Case)ಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸುವಲ್ಲಿ ಇಲ್ಲಿನ ಗ್ರಾಮೀಣ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.
ನಗರದ ಹೊರವಲಯದ ಯರಮರಸ್ ಕ್ಯಾಂಪಿನಲ್ಲಿ ಕೌಟುಂಬಿಕ ಕಲಹದಿಂದಾಗಿ ಸಂತೋಷಿ, ವೈಷ್ಣವಿ, ಆರತಿ ಎಂಬುವರನ್ನು ಕಳೆದ ಸೆ. 29ರ ಮಧ್ಯರಾತ್ರಿ ವೇಳೆ ಚಾಕುವಿನಿಂದ ಹತ್ಯೆ ಮಾಡಲಾಗಿತ್ತು. ಹೈದರಾಬಾದ್ ಮೂಲದ ಸೌರಬ್ ಅಲಿಯಾಸ್ ಸಾಯಿ ಕೊಲೆ ಮಾಡಿರುವ ಆರೋಪಿ. ಈ ಪ್ರಕರಣದಲ್ಲಿ ಸಾಯಿಯ ಸ್ನೇಹಿತರಿಬ್ಬರು ಶಾಮೀಲಾಗಿದ್ದು, ಅವರ ಪತ್ತೆ ಕಾರ್ಯ ನಡೆಯುತ್ತಿದೆ.
ಹತ್ಯೆಯ ಆರೋಪಿ ಸಾಯಿ ಕಳೆದ ಆರು ತಿಂಗಳ ಹಿಂದೆ ಸಂತೋಷಿಯವರ ಮಗಳಾದ ವೈಷ್ಣವಿಯನ್ನು ವಿವಾಹವಾಗಿದ್ದ. ಆದ್ರೆ ಕೌಟುಂಬಿಕ ಕಲಹ ಉಂಟಾಗಿ ವೈಷ್ಣವಿ ಗಂಡನನ್ನು ಬಿಟ್ಟು ತನ್ನ ತಾಯಿಯಿರುವ ಯರಮರಸ್ ಕ್ಯಾಂಪಿಗೆ ಬಂದು ನೆಲೆಸಿದ್ದಳು. ಹೀಗಾಗಿ ಕಳೆದ ಸೆ.29ರಂದು ಹೈದರಾಬಾದ್ನಿಂದ ಪತ್ನಿ ವೈಷ್ಣವಿಯನ್ನು ಮರಳಿ ಕರೆದುಕೊಂಡು ಹೋಗಲು ತನ್ನ ಇಬ್ಬರು ಸ್ನೇಹಿತರೊಂದಿಗೆ ಬಂದಿದ್ದ ಎನ್ನಲಾಗುತ್ತಿದೆ. ಈ ಬಗ್ಗೆ ಮಾತನಾಡುವ ವೇಳೆ ಮಾತಿನ ಚಕಮಕಿ ನಡೆದು ಅವರಿಗೆ ಚಾಕುವಿನಿಂದ ಇರಿದು ಸಾಯಿ ಹಾಗೂ ಆತನ ಇಬ್ಬರು ಸ್ನೇಹಿತರು ಪರಾರಿಯಾಗಿದ್ದರು.