ರಾಯಚೂರು: ರಾಯಚೂರು ಜಿಲ್ಲೆಯ ಮಕ್ಕಳು ಗುಣಮಟ್ಟದ ಶಿಕ್ಷಣದಿಂದ ವಂಚಿತರಾಗುತಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.
ರಾಯಚೂರು ಸರ್ಕಾರಿ ಶಾಲೆಗಳ ಸಮಸ್ಯೆಗಳು ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಶಿಕ್ಷಕರ ಕೊರತೆ ಒಂದೆಡೆಯಾದ್ರೆ, ಸರ್ಕಾರಿ ಶಾಲೆಗಳಲ್ಲಿ ಶೌಚಾಲಯ, ಕುಡಿಯುವ ನೀರಿನ ಸಮಸ್ಯೆ, ಕೊಠಡಿಗಳ ಸಂಖ್ಯೆ ಸಹ ಕಡಿಮೆಯಿದ್ದು, ಅನೇಕ ಶಾಲೆಗಳಲ್ಲಿ ಮಕ್ಕಳು ಗುಣಾತ್ಮಕ ಶಿಕ್ಷಣದಿಂದ ವಂಚಿತರಾಗಿದ್ದಾರೆ ಎನ್ನಲಾಗುತ್ತಿದೆ.
ಇನ್ನು ಜಿಲ್ಲೆಯಲ್ಲಿನ ಪ್ರಾಥಮಿಕ ಶಾಲೆಗಳಲ್ಲಿನ ಶೌಚಾಲಯದ ಸ್ಥಿತಿ ನೋಡುವುದಾದ್ರೆ, ಒಟ್ಟು 2,900 ಶೌಚಾಲಯಗಳಿವೆ. 1,293 ಗಂಡು ಮಕ್ಕಳ ಶೌಚಾಲಯಗಳಿದ್ದು, 1,323 ಹೆಣ್ಣು ಮಕ್ಕಳ ಶೌಚಾಲಯಗಳಿವೆ. 125 ಹೆಣ್ಣು ಮಕ್ಕಳ ಶೌಚಾಲಯದ ಕೊರತೆ ಕಂಡು ಬಂದಿದೆ. ಇನ್ನು ತಾಲೂಕುವಾರು ನೋಡುವುದಾದ್ರೆ ದೇಶದಲ್ಲಿಯೇ ಶೈಕ್ಷಣಿಕವಾಗಿ ಅತಿ ಹಿಂದುಳಿದ ತಾಲೂಕು ಎಂಬ ಹಣೆ ಪಟ್ಟಿ ಕಟ್ಟಿಕೊಂಡ ದೇವದುರ್ಗ ತಾಲೂಕಿನಲ್ಲಿ 56 ಹೆಣ್ಣು ಮಕ್ಕಳ ಶೌಚಾಲಯದ ಕೊರತೆ ಇದ್ದು, 63 ಗಂಡು ಮಕ್ಕಳ ಶೌಚಾಲಯ ಕೊರತೆಯಿದೆ.
ಪ್ರಾಥಮಿಕ ಶಾಲೆಗಳ ಶೌಚಾಲಯದ ಕುರಿತು ನೋಡುವುದಾದ್ರೆ ದೇವದುರ್ಗದಲ್ಲಿ ಒಟ್ಟು 634 ಶೌಚಾಲಯದ ಪೈಕಿ, 254 ಗಂಡು ಮಕ್ಕಳ ಶೌಚಾಲಯವಿದೆ. 63 ಶಾಲೆಗಳಲ್ಲಿ ಗಂಡುಮಕ್ಕಳ ಶೌಚಾಲಯದ ಕೊರತೆ ಕಂಡುಬಂದಿದ್ದು, 56 ಹೆಣ್ಣು ಮಕ್ಕಳ ಶೌಚಾಲಯದ ಕೊರತೆ ಇದೆ.
ಲಿಂಗಸೂಗೂರಿನ ಒಟ್ಟು 624 ಶೌಚಾಲಯಗಳಿದ್ದು 56 ಹೆಣ್ಣು, 63 ಗಂಡು ಮಕ್ಕಳ ಶೌಚಾಲಯದ ಕೊರತೆ ಇದೆ. ಮಾನವಿ ತಾಲೂಕಿನಲ್ಲಿ 52 ಶೌಚಾಲಯ, ರಾಯಚೂರು ತಾಲೂಕಿನಲ್ಲಿ 29 , ಸಿಂಧನೂರಿನಲ್ಲಿ 18 ಶೌಚಾಲಯದ ಕೊರತೆಯಿದೆ. ಹಾಗೂ ಕೆಲವೆಡೆ ಶಾಲಾ ಕಟ್ಟಡದ ಕಾಮಗಾರಿ ವಿಳಂಬವಾಗಿ ನಡೆಯುತ್ತಿದ್ದು, ಅನೇಕ ಶಾಲೆಗಳಲ್ಲಿ ಕಂಪೌಂಡ್, ಆಟದ ಮೈದಾನವಿಲ್ಲ. ಇದರಿಂದಾಗಿ ಮಕ್ಕಳಿಗೆ ತೊಂದರೆ ಉಂಟಾಗುತ್ತಿದ್ದು, ಇನ್ನಾದರೂ ಸಂಬಂಧಪಟ್ಟವರು ಸೂಕ್ತ ಕ್ರಮ ಕೈಗೊಳ್ಳಲಿ.