ರಾಯಚೂರು:ಪ್ರವಾಹ ಸಂತ್ರಸ್ತರಿಗೆ ನೆರವಾಗಲಿ ಎಂದು ದಾನಿಗಳಿಂದ ನಿರ್ಮಿತವಾದ ಮನೆಗಳು ಇಂದು ಮೂಲಭೂತ ಸೌಕರ್ಯಗಳಿಲ್ಲದೆ ಅವಸಾನದ ಹಾದಿಯಲ್ಲಿವೆ. ಹೀಗಾಗಿ ಅಧಿಕಾರಿಗಳು ಆಶ್ರಯ ಮನೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂಬುದು ಗುರ್ಜಾಪುರ ಗ್ರಾಮಸ್ಥರ ಒತ್ತಾಯವಾಗಿದೆ.
ಶಾಶ್ವತ ಪರಿಹಾರ ಕಲ್ಪಿಸುವಂತೆ ಗ್ರಾಮಸ್ಥರ ಒತ್ತಾಯ 2009ರ ಪ್ರವಾಹಕ್ಕೆ ತುತ್ತಾದ ಸಂದರ್ಭದಲ್ಲಿ ಗುರ್ಜಾಪುರ ಗ್ರಾಮವನ್ನು ಸ್ಥಳಾಂತರಿಸಿ ಗ್ರಾಮದಿಂದ ಸುಮಾರು 4 ಕಿ. ಮೀ. ದೂರದಲ್ಲಿ, 30 ಎಕರೆ ಪ್ರದೇಶದಲ್ಲಿ, ದಾನಿಗಳ ನೆರವಿನಿಂದ 90ಕ್ಕೂ ಅಧಿಕ ಮನೆಗಳನ್ನು ನಿರ್ಮಿಸಲಾಗಿದೆ. ಆದರೆ ಈ ಮನೆಗಳಲ್ಲಿ ಮೂಲಭೂತ ಸೌಕರ್ಯಗಳಿಲ್ಲದ ಕಾರಣ ಗ್ರಾಮದ ಯಾರೊಬ್ಬರೂ ಸ್ಥಳಾಂತರವಾಗಿಲ್ಲ. ಈ ಮನೆಗಳಿಗೆ ತೆರಳಲು ರಸ್ತೆಗಳನ್ನು ನಿರ್ಮಿಸಿಲ್ಲ. ಕಳೆದ ಮೂರು ವರ್ಷಗಳಿಂದಲೂ ಮಳೆಗಾಲದಲ್ಲಿ ಕೃಷ್ಣಾ ನದಿಯ ಪ್ರವಾಹ ಬರುತ್ತದೆ. ಆ ಸಮಯದಲ್ಲಿ ಗ್ರಾಮದ ಜನರನ್ನು ಸ್ಥಳಾಂತರಿಸುತ್ತಾರೆ ಪ್ರವಾಹ ಇಳಿದ ನಂತರ ಗ್ರಾಮಸ್ತರು ಮತ್ತೆ ಅವರ ಗ್ರಾಮಕ್ಕೆ ವಾಪಸ್ ಆಗ್ತಾರೆ. ಮತ್ತೆ ಅಧಿಕಾರಿಗಳಿಗೆ ಆ ಮನೆಗಳು ನೆನಪಾಗುವುದು ಮುಂದಿನ ಪ್ರವಾಹದ ಸಮಯದಲ್ಲಿ.
ಈ ಬಗ್ಗೆ ಗ್ರಾಮಸ್ಥ ಮಲ್ಲಯ್ಯ ಎಂಬುವರು ಮಾತನಾಡಿ, ಈ ಆಶ್ರಯ ಮನೆಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸಿ, ಶಾಶ್ವತ ಪರಿಹಾರ ಒದಗಿಸುವುದಾಗಿ ಅಧಿಕಾರಿಗಳು ಆಶ್ವಾಸನೆ ನೀಡುತ್ತಲೇ ಬಂದಿದ್ದಾರೆಯೇ ವಿನಃ ಅದನ್ನು ಈಡೇರಿಸಿಲ್ಲ, ಈ ಮನೆಗಳಲ್ಲಿ ವಾರಸುದಾರರಿಲ್ಲದೇ ಇರುವುದರಿಂದ ಮನೆಗಳ ಕಿಟಕಿ ಬಾಗಿಲುಗಳು ಕಳ್ಳರ ಪಾಲಾಗಿದ್ದು, ಕೆಲವು ಮನೆಗಳು ಈಗಲೋ ಆಗಲೋ ಬೀಳುವ ಹಂತದಲ್ಲಿವೆ. ಜೊತೆಗೆ ಈ ಮನೆಗಳ ಸುತ್ತಲು ಜಾಲಿಗಿಡಗಳು ಬೆಳೆದಿವೆ. ಗ್ರಾಮದ ಜನರ ಅಭಿಪ್ರಾಯ ಪಡೆಯದೆ ಗುತ್ತಿಗೆದಾರರ ಲಾಬಿಗೆ ಮಣಿದು ದೂರದ ಪ್ರದೇಶದಲ್ಲಿ ಮನೆ ನಿರ್ಮಾಣ ಮಾಡಿದ್ದಾರೆ. ಹೀಗಾಗಿ ಹೊಲ, ದನಕರುಗಳನ್ನು ಬಿಟ್ಟು ಹೋಗುವುದು ಕಷ್ಟವಾಗಿದೆ. ಹೀಗಾಗಿ ಪ್ರತಿವರ್ಷ ಉಂಟಾಗುವ ಪ್ರವಾಹದಿಂದ ನಮಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಈ ಬಗ್ಗೆ ರಾಯಚೂರು ಜಿಲ್ಲಾಧಿಕಾರಿ ಆರ್. ವೆಂಕಟೇಶ ಕುಮಾರ ಪ್ರತಿಕ್ರಿಯಿಸಿ, ದಾನಿಗಳಿಂದ ಆಶ್ರಯ ಯೋಜನೆಯಡಿಯಲ್ಲಿ, ಗುರ್ಜಾಪುರ ಗ್ರಾಮಸ್ಥರಿಗೆ ಮನೆಗಳನ್ನು ನಿರ್ಮಿಸಲಾಗಿದೆ. ಆದರೆ ಈ ಮನೆಗಳು ವಾಸಕ್ಕೆ ಯೋಗ್ಯವಿಲ್ಲದ ಕಾರಣ ಈ ಮನೆಗಳನ್ನು ನೆಲಸಮ ಮಾಡಿ ಹೊಸದಾಗಿ ಮನೆಗಳನ್ನು ನಿರ್ಮಿಸಲು ಸರ್ಕಾರಕ್ಕೆ 9.50 ಕೋಟಿ ರೂ. ವೆಚ್ಚದ ಪ್ರಸ್ತಾವನೆ ಸಲ್ಲಿಸಲಾಗಿದೆ. ಅನುಮೋದನೆ ದೊರೆತ ತಕ್ಷಣ ನಿರ್ಮಾಣ ಕಾರ್ಯ ಅರಂಭಿಸಲಾಗುವುದು. ಮೊದಲು ಜಿಲ್ಲಾಡಳಿತದಿಂದ ಸಂತ್ರಸ್ತರಿಗೆ ಹಕ್ಕು ಪತ್ರ ವಿತರಿಸಲಾಗುವುದು ಎಂದಿದ್ದಾರೆ.