ರಾಯಚೂರು:ಗುಣಮಟ್ಟ ಸರಿಯಿಲ್ಲ ಎಂದು ಭತ್ತವನ್ನ ಖರೀದಿಸದೆ ಖರೀದಿ ಕೇಂದ್ರದಿಂದ ವಾಪಸ್ ಕಳುಹಿಸಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ.
ನಗರದ ಎಪಿಎಂಸಿ ಆವರಣದಲ್ಲಿನ ಭತ್ತ ಖರೀದಿ ಕೇಂದ್ರದಲ್ಲಿ ರೈತರು ಭತ್ತವನ್ನು ಮಾರಾಟ ಮಾಡಲು ಕಳೆದ ಕೆಲವು ದಿನಗಳ ಹಿಂದೆ ಆನ್ಲೈನ್ನಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ. ನೋಂದಣಿ ಬಳಿಕ ಖರೀದಿ ಆರಂಭವಾದ ಹಿನ್ನೆಲೆ ಬುಧವಾರ 50 ಮಂದಿ ರೈತರು ತಮ್ಮ ಭತ್ತವನ್ನ ಮಾರಾಟ ಮಾಡಲು ಬಂದಿದ್ದಾರೆ. ಈ ವೇಳೆ ಖರೀದಿ ಕೇಂದ್ರದಲ್ಲಿ ತಾಂತ್ರಿಕ ವಿಧಾನದಿಂದ ಗುಣಮಟ್ಟ ಪರಿಶೀಲನೆ ಮಾಡದೆ, ಕೈಯಿಂದ ಉಜ್ಜಿ ಭತ್ತ ಗುಣಮಟ್ಟವಾಗಿಲ್ಲವೆಂದು ಖರೀದಿಸದೆ ವಾಪಸ್ ಕಳುಹಿಸಿದ್ದು, ಇದಕ್ಕೆ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೈಯಿಂದ ಉಜ್ಜಿ ಭತ್ತದ ಗುಣಮಟ್ಟ ಪರಿಶೀಲನೆ ಚಂದ್ರಬಂಡಾ, ಗಿಲ್ಲೆಸೂಗೂರು ವಲಯದಿಂದ ಬಂದಂತಹ ಭತ್ತವನ್ನು ಸಹ ಖರೀದಿಸದೆ ವಾಪಸ್ ಕಳುಹಿಸುತ್ತಿದ್ದಾರೆ. ಈಗಾಲೇ ಕೊರೊನಾ ಮಹಾಮಾರಿಯಿಂದ ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಇದರ ಜತೆಯಲ್ಲಿ ಅಕಾಲಿಕ ಮಳೆ ಉಂಟಾಗಿ, ಸಂಗ್ರಹಿಸಿ ಇಟ್ಟಿರುವ ಭತ್ತದ ಫಸಲು ಮೊಳಕೆ ಬರುತ್ತಿರುವುದು ರೈತರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಭತ್ತ ಖರೀದಿ ಕೇಂದದಲ್ಲಿ ಕೈಯಿಂದ ಉಜ್ಜಿ ಪರೀಕ್ಷೆ ಮಾಡಿ ಭತ್ತವನ್ನ ಖರೀದಿಸದೆ ರೈತರಿಗೆ ಅನ್ಯಾಯ ಮಾಡಲಾಗುತ್ತದೆ. ಕೂಡಲೇ ಅಧಿಕಾರಿಗಳು ತಾಂತ್ರಿಕ ವಿಧಾನದಿಂದ ಭತ್ತದ ಗುಣಮಟ್ಟವನ್ನ ಪರೀಕ್ಷಿಸಿ ಖರೀದಿ ಮಾಡಬೇಕು. ಇಲ್ಲದಿದ್ದರೆ ಬರುವ ದಿನಗಳಲ್ಲಿ ಭತ್ತದ ಬೆಳೆಯನ್ನ ಜಿಲ್ಲಾಧಿಕಾರಿ ಕಚೇರಿ ಮುಂದೆ ತೆಗೆದುಕೊಂಡು ಹೋಗಿ ಅಲ್ಲಿಯೇ ಸುರಿದು ಹೋರಾಟ ಮಾಡುವುದಾಗಿ ರೈತರು ಎಚ್ಚರಿಕೆ ನೀಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಸಂಬಂಧಿಸಿದ ಅಧಿಕಾರಿಗಳು, ಸರ್ಕಾರದ ನಿಯಮಾನುಸಾರ ಭತ್ತದ ಗುಣಮಟ್ಟವನ್ನ ಪರಿಶೀಲನೆ ಮಾಡಲಾಗುತ್ತದೆ. ಗುಣಮಟ್ಟವಿದ್ದರೆ ರೈತರಿಂದ ಖರೀದಿ ಮಾಡಲಾಗುವುದು. ಇಲ್ಲದಿದ್ದರೆ ಖರೀದಿಸಲು ಬರುವುದಿಲ್ಲ ಎನ್ನುತ್ತಿದ್ದಾರೆ.