ಲಿಂಗಸುಗೂರು :ತಾಲೂಕಿನಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹೇಳಿದ್ದು ಸರಿ, ಮಾಡಿದ ಆರೋಪಗಳೇ ಸತ್ಯ ಎಂಬುದನ್ನು ಅಲ್ಲಗಳೆದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮಿಕಾಂತರೆಡ್ಡಿ ಮೂವರು ಪಿಡಿಒಗಳನ್ನು ಅಮಾನತುಗೊಳಿಸಿ ಸಂಚಲನ ಉಂಟು ಮಾಡಿದ್ದಾರೆ.
ಮೂರು ವರ್ಷಗಳ ಅವಧಿಯಲ್ಲಿ ಸಾರ್ವಜನಿಕರು, ಸಂಘ-ಸಂಸ್ಥೆಗಳು ಹಾಗೂ ಇತರರಿಂದ ಬಂದ ದೂರುಗಳ ನಿಮಿತ್ತ ಮುಖ್ಯ ಯೋಜನಾಧಿಕಾರಿಗಳು ಸಲ್ಲಿಸಿದ್ದ ವಾಸ್ತವ ವರದಿ ಆಧರಿಸಿ ಸೆಪ್ಟೆಂಬರ್ 9ರಂದು ತಾಲೂಕಿನ ಮೂವರು ಪಿಡಿಒಗಳನ್ನು ಸೇವೆಯಿಂದ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ಅಕ್ರಮ ಎಸಗಿದ್ದ ಮೂವರು ಪಿಡಿಒಗಳನ್ನು ಅಮಾನತುಗೊಳಿಸಿದ ಜಿಪಂ ಸಿಇಒ ಜ್ಯೋತಿಬಾಯಿ (ನಾಗಲಾಪುರ), ಜಹೀರ್ ಹುಸೇನ್ (ಪೈದೊಡ್ಡಿ), ಪ್ರವೀಣಕುಮಾರ ಪಿ ಕೆ (ರೋಡಲಬಂಡ ತವಗ) ಅವರು 2017-18 ರಿಂದ 2019-20ರ ಅವಧಿಯಲ್ಲಿ ಕ್ರಿಯಾ ಯೋಜನೆಯಲ್ಲಿ ಇರದ, ಸರ್ಕಾರ ಮಾರ್ಗಸೂಚಿ ಉಲ್ಲಂಘಿಸಿ ಲಕ್ಷಾಂತರ ಹಣ ಅವ್ಯವಹಾರ ನಡೆಸಿರುವುದು ಮೇಲ್ನೋಟಕ್ಕೆ ದೃಢಪಟ್ಟಿದೆ ಎಂದು ಆದೇಶದಲ್ಲಿ ವಿವರಿಸಿದ್ದಾರೆ.
ಮೂರು ಪಂಚಾಯತ್‌ಗಳ ಆರೋಪಗಳನ್ನು ಪ್ರತ್ಯೇಕ ವಿಚಾರಣೆ ನಡೆಸಿ ಕನಿಷ್ಠ 5-6 ಪುಟಗಳ ವಿಶ್ಲೇಷಣೆ ಮಾಡಿ ಆದೇಶ ಹೊರಡಿಸಲಾಗಿದೆ. ಅಮಾನತು ಅವಧಿಯಲ್ಲಿ ಜೀವನಾಧಾರ ಭತ್ಯೆ ಪಡೆಯಲು ಸೂಚಿಸಿದ್ದಾರೆ. ಸದ್ಯ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಂಡಿರುವ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕರ ಕಾರ್ಯಕ್ಕೆ ರಾಯಚೂರು ಜಿಲ್ಲೆಯ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.