ರಾಯಚೂರು: ಮುಂಬರುವ ಶೈಕ್ಷಣಿಕ ವರ್ಷದಿಂದ ರಾಯಚೂರಿನಲ್ಲಿ ಇಂಡಿಯನ್ ಇನ್ಸ್‌ಟ್ಯೂಟ್ ಆಫ್ ಇನ್‌ಫಾರ್ಮೇಶನ್ ಟೆಕ್ನಾಲಜಿ (ಐಐಐಟಿ) ಪ್ರಾರಂಭಿಸಲು ವೇಗದ ತಯಾರಿ ನಡೆದಿದೆ. ಉನ್ನತ ಶಿಕ್ಷಣ ಸಂಸ್ಥೆ ಸ್ಥಾಪನೆಗೆ ಸರ್ಕಾರ ಸ್ಥಳ ಗುರುತು ಮಾಡಿದೆ. ಆದ್ರೆ ಸ್ಥಳ ಗುರುತಿಸಿರುವ ಸ್ಥಳದಲ್ಲಿ ಹಿಂದೆ ದಲಿತರಿಗೆ ಸರ್ಕಾರವೇ ಭೂಮಿ ನೀಡಿದ್ದು, ನಮ್ಮನ್ನು ಒಕ್ಕಲೆಬ್ಬಿಸಬೇಡಿ ಅನ್ನೋ ಕೂಗು ಇಲ್ಲಿನ ದಲಿತ ರೈತ ಕುಟುಂಬಗಳದ್ದು.
ಶೈಕ್ಷಣಿಕವಾಗಿ ಹಿಂದುಳಿದ ಪ್ರದೇಶವೆಂದು ಗುರುತಿಸಿಕೊಂಡಿರುವ ಜಿಲ್ಲೆಗೆ ಕೇಂದ್ರ ಸರ್ಕಾರ ಐಐಐಟಿ ಕೊಡುಗೆ ನೀಡಿದೆ. ಜಿಲ್ಲೆಯಲ್ಲಿ ಪ್ರಸಕ್ತ ವರ್ಷದಿಂದ ಆರಂಭವಾಗಬೇಕಾಗಿದ ಉನ್ನತಮಟ್ಟದ ತಾಂತ್ರಿಕ ಶಿಕ್ಷಣ ಸಂಸ್ಥೆ ಇನ್ನೂ ಆರಂಭವಾಗಿಲ್ಲ. ಬದಲಾಗಿ ತರಗತಿಗಳನ್ನು ಸದ್ಯ ಹೈದರಾಬಾದ್‌ನಲ್ಲಿ ನಡೆಸಲಾಗುತ್ತಿದೆ. ಇದೀಗ ಮುಂಬರುವ ವರ್ಷದಿಂದ ಐಐಐಟಿ ಪ್ರಾರಂಭಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಇದರ ಸ್ಥಾಪನೆಗೆ ಬಾಯಿದೊಡ್ಡಿ ಗ್ರಾಮದ ಬಳಿಯ ವಡವಾಟಿ ಸೀಮಾಂತರದ ಸರ್ವೇ ನಂಬರ್ 99/1/3 ರಲ್ಲಿ ಒಟ್ಟು 65 ಎಕರೆ ಜಮೀನು ಗುರುತಿಸಲಾಗಿದೆ.