ರಾಯಚೂರು : ಕಾಂಗ್ರೆಸ್ ಇಂದು ಎರಡನೇ ಪಟ್ಟಿ ಬಿಡುಗಡೆ ಮಾಡಿದ್ದು, 42 ಕ್ಷೇತ್ರಗಳ ಅಭ್ಯರ್ಥಿಗಳ ಟಿಕೆಟ್ ಕನ್ಫರ್ಮ್ ಆಗಿದೆ. ಈ ಪಟ್ಟಿಯಲ್ಲಿ ರಾಯಚೂರು ಜಿಲ್ಲೆಯ 5 ಕ್ಷೇತ್ರಗಳಿಗೆ ಟಿಕೆಟ್ ಫೈನಲ್ ಆಗಿಲ್ಲ. ಹೀಗಾಗಿ ಟಿಕೆಟ್ ಹಂಚಿಕೆ ಗೊಂದಲ ಮುಂದುವರೆದಿದೆ ಎನ್ನುವ ಚರ್ಚೆ ಜಿಲ್ಲೆಯಲ್ಲಿ ನಡೆಯುತ್ತಿದೆ.
ಮೊದಲ ಪಟ್ಟಿಲ್ಲಿ ಪರಿಶಿಷ್ಟ ಪಂಗಡ (ಎಸ್‌ಟಿ) ಮೀಸಲು ಇರುವ ರಾಯಚೂರು ಗ್ರಾಮೀಣ ಕ್ಷೇತ್ರದ ಹಾಲಿ ಶಾಸಕರಿದ್ದ ಬಸವನಗೌಡ ದದ್ದಲ್ ಹಾಗೂ ಮಸ್ಕಿ ವಿಧಾನಸಭಾ ಕ್ಷೇತ್ರಗಳ ಹಾಲಿ ಶಾಸಕರಾಗಿದ್ದ ಶಾಸಕ ಬಸವನಗೌಡ ತುರುವಿಹಾಳಗೆ ಟಿಕೆಟ್ ದೊರೆತಿದೆ. ಇನ್ನುಳಿದ ರಾಯಚೂರು ನಗರ, ಮಾನವಿ, ಸಿಂಧನೂರು, ದೇವದುರ್ಗ, ಲಿಂಗಸೂಗೂರು ವಿಧಾನಸಭಾ ಕ್ಷೇತ್ರಗಳಿಗೆ ಟಿಕೆಟ್ ಅಂತಿಮವಾಗಿಲ್ಲ. ಹೀಗಾಗಿ ಎರಡನೇ ಪಟ್ಟಿಯಲ್ಲಿ ಐದು ಕ್ಷೇತ್ರಗಳ ಅಭ್ಯರ್ಥಿಗಳಿಗೆ ಟಿಕೆಟ್ ಫೈನಲ್ ಆಗುತ್ತೆ ಎನ್ನುವ ನಿರೀಕ್ಷೆ ಇತ್ತು.
ಎನ್.ಎಸ್.ಬೋಸರಾಜ್ ಪೈಪೋಟಿ:ಕಾಂಗ್ರೆಸ್ ರಾಯಚೂರು ನಗರ ಕ್ಷೇತ್ರಕ್ಕೆ ಮುಸ್ಲಿಂ ಸಮುದಾಯಕ್ಕೆ ಟಿಕೆಟ್ ನೀಡುತ್ತಾ ಬಂದಿದೆ. ಆದರೆ ಈ ಸಲ ಎಐಸಿಸಿ ಕಾರ್ಯದರ್ಶಿ ಎನ್.ಎಸ್.ಬೋಸರಾಜ್ ಪ್ರಬಲ ಆಕಾಂಕ್ಷಿಯಾಗಿದ್ದು, ಪೈಪೋಟಿ ನಡೆಸಿದ್ದಾರೆ. ಆದರೆ ಇತ್ತ ಮುಸ್ಲಿಂ ಸಮುದಾಯದ ಮುಖಂಡರಿಗೆ ಟಿಕೆಟ್ ನೀಡಬೇಕು ಎನ್ನುವ ನಿಟ್ಟಿನಲ್ಲಿ ಅಲ್ಪಸಂಖ್ಯಾತರ ಸಂಘಟನೆಗಳು, ಮುಖಂಡರು ಒತ್ತಾಯಿಸಿರುವುದಲ್ಲದೆ ಪ್ರತಿಭಟನೆಗಳನ್ನು ಮಾಡಿ, ಹೈಕಮಾಂಡ್ ಮೇಲೆ ಪ್ರಭಾವ ಹಾಕುತ್ತಿದ್ದಾರೆ. ಎನ್.ಎಸ್.ಬೋಸರಾಜ್ ಹಾಗೂ ಅವರ ಪುತ್ರ ರವಿಬೋಸರಾಜ್ ಟಿಕೆಟ್ಗಾಗಿ ಭಾರಿ ಸ್ಪರ್ಧೆಗಿಳಿದಿದ್ದು, ಒಂದು ಹಂತದಲ್ಲಿ ಎನ್.ಎಸ್.ಬೋಸರಾಜ್ರಿಗೆ ಟಿಕೆಟ್ ಫೈನಲ್ ಆಗಲಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.