ಕರ್ನಾಟಕ

karnataka

ETV Bharat / state

ರಾಯಚೂರಿನಲ್ಲಿ ಸೋಂಕಿತರ ಸಂಖ್ಯೆ 356ಕ್ಕೆ ಏರಿಕೆ: 19 ಕಂಟೇನ್ಮೆಂಟ್ ವಲಯಗಳ ರಚನೆ - ರಾಯಚೂರು ಡಿಸಿ ಲೇಟೆಸ್ಟ್​ ಕೊರೊನಾ ಸುದ್ದಿಗೋಷ್ಟ

ರಾಯಚೂರು ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ಈವರೆಗೆ 356 ಕೊರೊನಾ ಪಾಸಿಟಿವ್​​ ಪ್ರಕರಣಗಳು ದೃಢಪಟ್ಟಿವೆ ಎಂದು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

raichur dc venkatesh kumar pressmeet
ರಾಯಚೂರು ಡಿಸಿ ಸುದ್ದಿಗೋಷ್ಟಿ

By

Published : Jun 5, 2020, 6:29 PM IST

ರಾಯಚೂರು : ಜಿಲ್ಲೆಯಲ್ಲಿ ಕೊರೊನಾ ಸೋಂಕು ಹರಡದಂತೆ ತಡೆಯುವ ನಿಟ್ಟಿನಲ್ಲಿ ಇಲ್ಲಿಯವರೆಗೆ 19 ಕಂಟೇನ್ಮೆಂಟ್ ಝೋನ್​​​​ಗಳನ್ನ ರಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಆರ್.ವೆಂಕಟೇಶ್ ಕುಮಾರ್ ತಿಳಿಸಿದ್ದಾರೆ.

ರಾಯಚೂರು ಡಿಸಿ ಸುದ್ದಿಗೋಷ್ಠಿ
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಗುರುವಾರ ದೃಢಪಟ್ಟ 88 ಕೊರೊನಾ ಪಾಸಿಟಿವ್ ಪ್ರಕರಣ ಸೇರಿ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 356ಕ್ಕೆ ಏರಿಕೆಯಾಗಿದೆ.
ಸೋಂಕು ಹರಡದಂತೆ ತಡೆಯಲು 19 ಕಂಟೇನ್ಮೆಂಟ್ ವಲಯಗಳನ್ನು ಮಾಡಲಾಗಿದೆ.. ನಿನ್ನೆ‌ ಬಂದ 88 ಪ್ರಕರಣಗಳ ಪೈಕಿ ಮೂವರು ಪೇದೆಗಳು, ರಾಂಪುರದ ಪೋಸ್ಟ್ ಮ್ಯಾನ್, ಆಸ್ಕಿಹಾಳದ ಆಶಾ ಕಾರ್ಯಕರ್ತೆ, ಮಾನ್ವಿ ಪಟ್ಟಣದ ಸ್ವಾಫ್ಟವೇರ್ ಇಂಜಿನಿಯರ್ ಮತ್ತು ಸಿರವಾರ ತಾಲೂಕಿನ ಗುಡದಿನ್ನಿ ಗ್ರಾಮದ ವ್ಯಕ್ತಿಗೆ ಸೋಂಕು ಹರಡಿದೆ ಎಂದು ಮಾಹಿತಿ ನೀಡಿದ್ರು.

ಆಸ್ಕಿಹಾಳ ಆಶಾ ಕಾರ್ಯಕರ್ತೆಯ ಸಹೋದರ ಬೆಂಗಳೂರಿನಿಂದ ಬಂದಿದ್ದು, ಅವರಿಂದ ಸೋಂಕು ತಗುಲಿರುವ ಸಾಧ್ಯತೆಯಿದೆ. ರಾಂಪುರದ ಪೋಸ್ಟ್​​ಮ್ಯಾನ್ ಕೃಷಿ‌ ವಿವಿಯಲ್ಲಿನ ಕ್ವಾರಂಟೈನ್ ಕಟ್ಟಡದ ಬಳಿ ಓಡಾಡಿದ್ದು, ಭದ್ರತೆಗೆ ಕರ್ತವ್ಯದಲ್ಲಿದ್ದ ಪೇದೆಗಳ ಸಂಪರ್ಕದಿಂದ ಬಂದಿರಬಹುದೆಂದು ಶಂಕಿಸಲಾಗಿದೆ. ಮಾನ್ವಿ ಪಟ್ಟಣದ ಸೋಂಕಿತ ವ್ಯಕ್ತಿ ಹೈದರಾಬಾದ್​ನಲ್ಲಿ ಸಾಫ್ಟ್​​ವೇರ್ ಇಂಜಿನಿಯರ್ ಆಗಿದ್ದು, ಇತ್ತೀಚೆಗೆ ಊರಿಗೆ ಬಂದಿದ್ದರು. ಹಾಗೂ ಸಿರವಾರ ತಾಲೂಕಿನ ಗುಡದಿನ್ನಿ ಗ್ರಾಮದ‌ ವ್ಯಕ್ತಿ ಉಸಿರಾಟ, ಅಸ್ತಮಾ ತೊಂದರೆ ಅನುಭವಿಸುತ್ತಿದ್ದು, ತಪಾಸಣೆ ಮಾಡಿದಾಗ ಸೋಂಕು ಇರುವುದು ದೃಢಪಟ್ಟಿದೆ ಎಂದರು.

ಇನ್ನುಳಿದ ಪ್ರಕರಣಗಳಲ್ಲಿ ಲಿಂಗಸೂಗೂರಿನಲ್ಲಿ ಕ್ವಾರಂಟೈನ್‌ನಲ್ಲಿದ್ದ ಇಬ್ಬರು, ದೇವದುರ್ಗ ತಾಲೂಕಿನ ನಗರಗುಂಡ ಕ್ವಾರಂಟೈನ್‌ನಲ್ಲಿದ 29, ಕೊತ್ತದೊಡ್ಡಿ ಕ್ವಾರಂಟೈನ್ ನಲ್ಲಿದ್ದ 10 ಜನ, ದೇವದುರ್ಗ ಪಟ್ಟಣದಲ್ಲಿನ ಕ್ವಾರಂಟೈನ್​​​​ನಲ್ಲಿದ್ದ 10 ಜನರು ಸೇರಿದಂತೆ 75 ಜನರಲ್ಲಿ ಸೋಂಕು ತಗುಲಿರುವುದು ಪತ್ತೆಯಾಗಿದೆ ಎಂದು ತಿಳಿಸಿದ್ರು.

ಗುರುವಾರ ಬಿಡುಗಡೆಯಾದ ಮೀಡಿಯಾ ಬುಲೆಟಿನ್‌ನಲ್ಲಿ ಕೆಲವೊಂದು ಗೊಂದಲವಾಗಿದ್ದು, ಯಾರ ಸಂಪರ್ಕದಿಂದ ಸೋಂಕು ಹರಡಿದೆ ಎನ್ನುವ ಮಾಹಿತಿ ತಪ್ಪಾಗಿದೆ. ರಾಯಚೂರಿನ ಪಿ. 2612 ಸೋಂಕಿತನ ಸಂಪರ್ಕದಿಂದ ದೇವದುರ್ಗ ಕ್ವಾರಂಟೈನ್ ‌ನಲ್ಲಿರುವ 30 ಜನರಿಗೆ ಸೋಂಕು ತಗುಲಿದೆ ಎಂದು ಬುಲೆಟಿನ್​​ನಲ್ಲಿ ತಿಳಿಸಲಾಗಿದ್ದು, ಅದನ್ನ ಸರಿಪಡಿಸಲು, ಮೇಲಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ಹೇಳಿದ್ರು.

ಮಹಾರಾಷ್ಟ್ರ, ಆಂಧ್ರ, ತೆಲಂಗಾಣದಿಂದ ಬಂದವರ ವರದಿಗಳು ಬಂದಿದ್ದು, ಸೋಂಕಿತರ ಸಂಪರ್ಕದಲ್ಲಿರುವವರ ವರದಿ ಬರುವುದು ಬಾಕಿಯಿದೆ. ಇನ್ನು ಸರಕಾರಿ ಕ್ವಾರಂಟೈನ್​​ನಲ್ಲಿ 1,238 ಜನರಿದ್ದು, ಸೋಂಕಿತರ ಹತ್ತಿರದವರನ್ನ ಕ್ವಾರಂಟೈನ್ ಮಾಡಲಾಗುತ್ತಿದೆ ಎಂದು ತಿಳಿಸಿದ್ರು.

ಹೊಟ್ಟೆನೋವಿನಿಂದ ಮೃತಪಟ್ಟ ಬಾಲಕನ‌ ವರದಿ ಪಾಸಿಟಿವ್ :ಕ್ವಾರಂಟೈನ್​​ನಲ್ಲಿದ್ದಾಗ ಹೊಟ್ಟೆನೋವಿನಿಂದ ಮೃತಪಟ್ಟ ಜಿಲ್ಲೆಯ ದೇವದುರ್ಗ ತಾಲೂಕಿನ ಬಾಲಕನ‌ ವರದಿ ಇದೀಗ ಪಾಸಿಟಿವ್ ಬಂದಿದೆ. ಗುರುವಾರ ವರದಿ ಬರದಿದ್ದರೂ ‌ಬಾಲಕನ‌ ಅಂತ್ಯ ಸಂಸ್ಕಾರವನ್ನ ಕೋವಿಡ್-19 ಶಿಷ್ಟಾಚಾರದಂತೆ ಮಾಡಲಾಗಿದೆ. ಮೃತ ಬಾಲಕನಿಗೆ ಸೋಂಕಿತ ಚಿಕ್ಕಪ್ಪನಿಂದ ಕೊರೊನಾ ತಗುಲಿರುವ ಸಾಧ್ಯತೆಯಿದೆ. ಅಲ್ಲದೇ ಬಾಲಕನಿಗೆ ಈ ಮುಂಚೆ ಹೃದಯ ಸಂಬಂಧಿ ಆರೋಗ್ಯ ಸಮಸ್ಯೆಯಿತ್ತು, ಮುಂಬೈನಲ್ಲಿ ಚಿಕಿತ್ಸೆ ಕೂಡ ನೀಡಲಾಗಿತ್ತು. ಆದ್ರೆ ಈ ಬಗ್ಗೆ ಪಾಲಕರು ಗಮನಕ್ಕೆ ತಂದಿಲ್ಲ. ಹೀಗಾಗಿ ಬಾಲಕನ ಸಾವಿಗೆ ಕೊರೊನಾ ಕಾರಣವಲ್ಲವೆಂದು ಹೇಳಬಹುದು ಎಂದು ಜಿಲ್ಲಾಧಿಕಾರಿ ವೆಂಕಟೇಶ್​​ ಕುಮಾರ್​​ ಮಾಹಿತಿ ನೀಡಿದ್ರು.

ABOUT THE AUTHOR

...view details