ರಾಯಚೂರು:ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಸರ್ಕಾರಿ ಹಾಗೂ ಖಾಸಗಿ ಕೋವಿಡ್ ಆಸ್ಪತ್ರೆಗಳಿಗೆ ಸಮರ್ಪಕವಾಗಿ ಆಕ್ಸಿಜನ್ ಪೂರೈಕೆ ಹಿನ್ನೆಲೆ ಜಿಲ್ಲೆಗೆ ಹಂಚಿಕೆಯಾದ ಆಕ್ಸಿಜನ್ ಪ್ರಮಾಣವನ್ನು ಹೆಚ್ಚಿಸಬೇಕು ಎಂದು ರಾಜ್ಯ ಸರ್ಕಾರದ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ಜಿಲ್ಲಾಧಿಕಾರಿ ಆರ್. ವೆಂಕಟೇಶ ಕುಮಾರ್ ಮನವಿ ಮಾಡಿದ್ದಾರೆ.
ಜಿಲ್ಲೆಯಲ್ಲಿ ಪ್ರತಿ ನಿತ್ಯ 700 ರಿಂದ 800 ಪ್ರಕರಣಗಳು ದೃಢಪಡುತ್ತಿವೆ. ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆ ಸೇರಿ ಒಟ್ಟು 29 ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಸೋಂಕಿತರ ಆಧಾರದ ಮೇಲೆ ಹಿಂದೆ ಜಿಲ್ಲೆಗೆ ಒಟ್ಟು 10.38 ಎಂ.ಟಿ ಆಮ್ಲಜನಕ ಸಂಚಿಕೆ ಮಾಡಲಾಗಿರುತ್ತದೆ. ಆದರೆ ಜಿಲ್ಲೆಯ ಸರ್ಕಾರಿ ಆಸ್ಪತ್ರೆ ಹಾಗೂ ಇತರೆ ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾಗಿರುವ ರೋಗಿಗಳಿಗೆ ಒಟ್ಟು 15 ಮೆಟ್ರಿಕ್ ಟನ್ ಆಮ್ಲಜನಕ ಬಳಕೆಯಾಗುತ್ತಿದೆ. ಜಿಲ್ಲೆಯ ಖಾಸಗಿ ಆಸ್ಪತ್ರೆಗಳು ಸಿಲಿಂಡರ್ ಮೇಲೆ ಅವಲಂಬಿತವಾಗಿದ್ದು, ಜಿಲ್ಲೆಯ ಮೂರು ರಿಫಿಲ್ಲಿಂಗ್ ಘಟಕಗಳು ನೆರೆಯ ಯಾದಗಿರಿ ಹಾಗೂ ಕಲಬುರಗಿ ಜಿಲ್ಲೆಯ ಘಟಕಗಳ ಮೇಲೆ ಅವಲಂಬನೆಯಾಗಿವೆ.
ರಿಮ್ಸ್ ಆಸ್ಪತ್ರೆಯ 700 ಹಾಸಿಗೆಗಳಲ್ಲಿ 300, ಓಪೆಕ್ ಆಸ್ಪತ್ರೆಯ 250 ಹಾಸಿಗೆಗಳಲ್ಲಿ 160 ಹಾಗೂ ಎಂಸಿಹೆಚ್ ಆಸ್ಪತ್ರೆಯ 400 ಹಾಸಿಗೆಗಳಲ್ಲಿ 200 ಕೊರೊನಾ ರೋಗಿಗಳ ಚಿಕಿತ್ಸೆಗೆ ಬಳಕೆ ಮಾಡಿಕೊಳ್ಳಲಾಗುತ್ತಿದ್ದು, ಈ ಎಲ್ಲಾ ಆಸ್ಪತ್ರೆಗಳಿಗೆ ಅಂದಾಜು 0.5 ಎಂ.ಟಿ ಆಮ್ಲಜನಕ ಅವಶ್ಯಕತೆ ಇದೆ. ಒಟ್ಟಾರೆಯಾಗಿ ಜಿಲ್ಲೆಗೆ 20 ರಿಂದ 25 ಎಂ.ಟಿ ಆಮ್ಲಜನಕ ಬೇಡಿಕೆಯಿದ್ದು, ಈ ಎಲ್ಲಾ ಅಂಶಗಳನ್ನು ಪರಿಗಣಿಸಿ ಈ ಹಿಂದೆ ಜಿಲ್ಲೆಗೆ ಹಂಚಿಕೆ ಮಾಡಲಾಗಿದ್ದ 10.38ಎಂ.ಟಿ ಬದಲಾಗಿ 15 ಎಂ.ಟಿ ಗೆ ಹೆಚ್ಚಿಸಬೇಕು ಎಂದು ಮನವಿ ಮಾಡಿದ್ದಾರೆ.