ರಾಯಚೂರು:ಕುಡಿದ ಅಮಲಿನಲ್ಲಿ ಯುವಕ ತನ್ನ ಸ್ನೇಹಿತನನ್ನೇ ಹತ್ಯೆ ಮಾಡಿರುವ ಘಟನೆ ಘಟನೆ ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ನಾಗರಾಳ ಗ್ರಾಮದಲ್ಲಿ ಮಂಗಳವಾರ ರಾತ್ರಿ ಜರುಗಿದೆ. ರವಿಕುಮಾರ (33) ಕೊಲೆಯಾದ ಯುವಕ. ಕೊಲೆ ಮಾಡಿರುವ ಆರೋಪಿ ಹುಬ್ಬಳ್ಳಿ ಮೂಲದ ಪವನ ಕುಮಾರ ಎಂದು ಗುರುತಿಸಲಾಗಿದೆ.
ನಿನ್ನೆ ರಾತ್ರಿ ಮೃತನ ಮನೆಯ ಮಾಳಿಗೆಯ ಮೇಲೆ ಇಬ್ಬರು ಸ್ನೇಹಿತರು ಮದ್ಯಪಾನ ಮಾಡುತ್ತಿದ್ದರು. ಕುಡಿದ ಮತ್ತಲ್ಲಿ ಇಬ್ಬರು ಸ್ನೇಹಿತರ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳವಾಗಿದೆ. ಈ ವೇಳೆ, ಹುಬ್ಬಳ್ಳಿ ಮೂಲದ ಪವನ ಕುಮಾರ ತನ್ನ ಸ್ನೇಹಿತ ರವಿಕುಮಾರನನ್ನು ಕೊಲೆ ಮಾಡಿದ್ದಾನೆ. ಮುದಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಆರೋಪಿಯನ್ನ ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ವಿದ್ಯುತ್ ತಂತಿ ತಗುಲಿ ಯುವಕ ಸಾವು:ವಿದ್ಯುತ್ ತಂತಿ ತಗುಲಿ ಯುವಕನೊಬ್ಬ ಸಾವನ್ನಪ್ಪಿರುವ ದುರ್ಘಟನೆ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ರಾಮರೆಡ್ಡಿ ಕ್ಯಾಂಪ್ನಲ್ಲಿ ಸಂಭವಿಸಿದೆ. ರಾಮರೆಡ್ಡಿ ಕ್ಯಾಂಪಿನ ನಿವಾಸಿ ಭೀಮಶಂಕರ (20) ವಿದ್ಯುತ್ ತಗುಲಿ ಮೃತಪಟ್ಟಿದ್ದಾನೆ. ರಾಮರೆಡ್ಡಿ ಕ್ಯಾಂಪ್‌ನ ವ್ಯಾಪ್ತಿಯಲ್ಲಿ ಗ್ರಾಮ ಪಂಚಾಯ್ತಿ ವತಿಯಿಂದ ಕೆಲಸ ಮಾಡುತ್ತಿದ್ದ, ವಿದ್ಯುತ್ ಕಂಬಕ್ಕೆ ಬಲ್ಪು ಹಾಕಲು ಹೋದಾಗ ವಿದ್ಯುತ್ ತಂತಿ ತಗುಲಿ ಮೃತಪಟ್ಟಿದ್ದಾನೆ ಎಂದು ಹೇಳಲಾಗುತ್ತಿದೆ. ಮಗನನ್ನು ಕಳೆದಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ತಾಯಿ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.