ರಾಯಚೂರು:ದೀಪಾವಳಿ ಹಬ್ಬದ ವಿಶೇಷವೇ ಹಣತೆ ದೀಪ. ಗ್ರಾಹಕರ ಅಪೇಕ್ಷೆಯಂತೆ ಮಣ್ಣಿನ ಹಣತೆ ತಯಾರಿಸಿ ಮಾರಾಟ ಮಾಡಿ ಜೀವನ ಸಾಗಿಸುವ ಹಲವಾರು ಕುಟುಂಬಗಳು ಇದ್ದು, ಆ ಕುಟುಂಬಗಳಿಗೆ ಇದೀಗ ಕೊರೊನಾ ಪೆಟ್ಟು ನೀಡಿದೆ.
ಮಣ್ಣಿನ ಹಣತೆ ಮಾರಾಟಗಾರರಿಗೆ ಕೊರೊನಾ ಭಯ ನಗರದ ಜಿಲ್ಲಾ ಕ್ರೀಡಾಂಗಣದ ಮುಂಭಾಗದಲ್ಲಿ ರಾಜಸ್ಥಾನ ಮೂಲದ ವ್ಯಾಪಾರಿಗಳು ಬೆಳಕಿನ ಹಬ್ಬ ದೀಪಾವಳಿ ಸಮಯದಲ್ಲಿ ಸುಮಾರು ವರ್ಷಗಳಿಂದ ಜೇಡಿ ಮಣ್ಣಿನಿಂದ ದೀಪ ತಯಾರಿಸಿ, ಮಾರಾಟ ಮಾಡುತ್ತಿದ್ದರು. ಆದರೆ ಕೊರೊನಾದಿಂದಾಗಿ ಜನರು ಖರೀದಿಗೆ ಹಿಂದೇಟು ಹಾಕುತ್ತಿರುವುದರಿಂದ ಮಾರಾಟ ವಿರಳವಾಗಿದೆ.
ರಾಜಸ್ಥಾನದಲ್ಲಿ ತಯಾರಿಸಿದ ವಿವಿಧ ಬಗೆಯ ಜೇಡಿ ಮಣ್ಣಿನ ದೀಪ ಸೇರಿದಂತೆ ಮೂರು ಬಗೆಯ ಮಣ್ಣಿನಿಂದ ತಯಾರಿಸಿದ ಅಖಂಡ ದೀಪ, ಖಂದಿಲ್, ದಂಡಿ ದೀಪ, ಪಂಚಮುಖಿ ದೀಪ,ಲ್ಯಾಂಪ್, ನಕ್ಷತ್ರ ದೀಪ, ಆಮೆ ದೀಪ ಸೇರಿದಂತೆ ಮೂವತ್ತಕ್ಕೂ ಅಧಿಕ ಬಗೆಯ ರೂ. 5 ರಿಂದ ರೂ.350 ವರೆಗಿನ ವಿವಿಧ ಹಣತೆಗಳನ್ನು ಮಾರಾಟಕ್ಕೆ ತರಲಾಗುತ್ತಿತ್ತು.
ರಾಜಸ್ಥಾನ ಮೂಲದ ಹಣತೆ ವ್ಯಾಪಾರಿ ರಾದೇಶಾಮ ಪ್ರಜಾಪತಿ ಮಾತನಾಡಿ, ಪ್ರತಿ ವರ್ಷ ದೀಪಾವಳಿ ಸಮಯದಲ್ಲಿ ನಾವು ವಿವಿಧ ಬಗೆಯ ಮಣ್ಣಿನಿಂದ ತಯಾರಿಸಿದ ದೀಪಗಳು, ಮಣ್ಣಿನ ಪಾತ್ರೆಗಳು, ಗೃಹ ಅಲಂಕಾರಿಕ ವಸ್ತುಗಳನ್ನು ತಂದು ಮಾರಾಟ ಮಾಡುತ್ತಿದ್ದೇವು. ಆದರೆ ಕೊರೊನಾದಿಂದಾಗಿ ಜನರು ಖರೀದಿಗೆ ಮುಂದಾಗದಿರುವುದು ಆತಂಕಕ್ಕೆ ಎಡೆಮಾಡಿಕೊಟ್ಟಿದೆ. ಕಳೆದ ವರ್ಷ ಈ ಸಮಯದಲ್ಲಿ ಭರ್ಜರಿ ವ್ಯಾಪಾರ ವಾಗಿತ್ತು. ಮುಂದಿನ ಒಂದು ವಾರದಲ್ಲಿ ಉತ್ತಮ ವ್ಯಾಪಾರವಾಗುವ ನಿರೀಕ್ಷೆಯಲ್ಲಿ ಇದ್ದೇವೆ ಎಂದರು.