ರಾಯಚೂರು: ಕೃಷಿಗೆ ಹೈಟೆಕ್ ಟಚ್ ನೀಡಲು ಹಲವು ತಂತ್ರಜ್ಞಾನವನ್ನು ಬಳಕೆ ಮಾಡಲಾಗುತ್ತಿದೆ. ಇದೀಗ ಕೃಷಿ ಕ್ಷೇತ್ರದಲ್ಲಿ ರಾಜ್ಯದಲ್ಲಿ ಹೊಸದಾಗಿ ಮೈಲಿಗಲ್ಲು ಸ್ಥಾಪಿಸುವ ನಿಟ್ಟಿನಲ್ಲಿ ರಾಯಚೂರು ಕೃಷಿ ವಿಶ್ವವಿದ್ಯಾಲಯ ಹೊಸ ಪ್ರಯೋಗಾತ್ಮಕ ಪರೀಕ್ಷೆಗೆ ಮುಂದಾಗಿದೆ. ಇದಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡಿದ್ದು, ಪ್ರಯೋಗಾತ್ಮಕ್ಕೆ ಪರೀಕ್ಷೆಗೆ ಅಣಿಯಾಗಿದೆ. ಈ ಕುರಿತು ಒಂದು ವರದಿ ಇಲ್ಲಿದೆ.
ಕೃಷಿ ಕ್ಷೇತ್ರದಲ್ಲಿ ಕೂಲಿ ಕಾರ್ಮಿಕರ ಸಮಸ್ಯೆ ಎದುರಾಗುತ್ತಿದೆ. ಇದರಿಂದ ರೈತರು ಬೆಳೆದ ಬೆಳೆಗಳಿಗೆ ಕೀಟನಾಶಕ, ಪೋಷಕಾಂಶ ಸಿಂಪಡಣೆ ಮಾಡಲು ರೈತರಿಗೆ ಸಮಸ್ಯೆಯಿದೆ. ಜೊತೆಗೆ ಈ ಔಷಧಿ ಸಿಂಪಡಣೆಯಿಂದ ಕಾಯಿಲೆಗಳು ಸಹ ಬರುತ್ತದೆ ಎಂದು ತಜ್ಞರ ವರದಿ ಹೇಳುತ್ತಿದೆ. ಈ ಸಮಸ್ಯೆಯನ್ನು ದೂರ ಮಾಡಲು, ವಿದೇಶಗಳಲ್ಲಿ ಆಳವಡಿಸಿಕೊಳ್ಳುತ್ತಿರುವ ಆಧುನಿಕ ಕೃಷಿ ಪದ್ಧತಿಯನ್ನ ರಾಜ್ಯದಲ್ಲಿ ಆಳವಡಿಸುವ ಉದ್ದೇಶವನ್ನು ರಾಯಚೂರು ಕೃಷಿ ವಿಶ್ವವಿದ್ಯಾಲಯದ ಕೃಷಿ ತಾಂತ್ರಿಕ ಮಹಾವಿದ್ಯಾಲಯ ಹೊಂದಿದೆ. ಕೃಷಿಗೆ ಹೈಟೆಕ್ ನೀಡಿಡುವ ಅವಿಷ್ಕಾರದ ಕೊನೆಯ ಹಂತಕ್ಕೆ ತಲುಪಿದೆ.
ಕಳೆದ ಎರಡು ವರ್ಷಗಳಿಂದ ರಾಯಚೂರು ಕೃಷಿ ತಾಂತ್ರಿಕ ಮಹಾವಿದ್ಯಾಲಯದಿಂದ ಬೆಳೆಗಳಿಗೆ ಕೀಟನಾಶಕ, ಪೋಷಕಾಂಶ ಸಿಂಪಡಣೆ ಮಾಡಲು ಡ್ರೋನ್ ಬಳಕೆ ಮಾಡುವ ಯೋಜನೆ ಕೈಗೆತ್ತಿಕೊಂಡಿತ್ತು. ಈ ಯೋಜನೆಗೆ ಡ್ರೋನ್‌ಗೆ ಬೇಕಾದ ಬಿಡಿ ಭಾಗಗಳನ್ನ ತರಿಸಿಕೊಂಡು, ಮೊದಲ ಹಂತ 5 ಲೀಟರ್ ಸಾಮರ್ಥ್ಯ ಕ್ರಿಮಿನಾಶಕ ಸಿಂಪಡಣೆ ಯೋಜನೆ ರೂಪಿಸಿತ್ತು. ಡ್ರೋನ್ ಸಿದ್ಧಪಡಿಸಿ, ಕೃಷಿ ಆವರಣದಲ್ಲಿನ ಪ್ರಾಯೋಗಿಕ ಔಷಧಿ ಸಿಂಪಡಣೆ ಮಾಡಿತ್ತು. ಇದರಲ್ಲಿ ಯಶಸ್ಸು ಕಂಡು ಬಳಿಕ, 5 ಲೀಟರ್ ಸಾಮರ್ಥ್ಯವನ್ನ ಹೆಚ್ಚಿಸಬೇಕು ಎನ್ನುವ ಉದ್ದೇಶದಿಂದ 20 ಲೀಟರ್ ಸಾಮರ್ಥ್ಯ ಹೊತ್ತುಕೊಂಡು ಹೋಗಬಲ್ಲ ಡ್ರೋನ್ ಸಿದ್ಧಪಡಿಸಿಕೊಂಡಿತ್ತು. ಇದಕ್ಕಾಗಿ ದೇಶ-ವಿದೇಶಗಳಿಂದ ಬಿಡಿ ಭಾಗಗಳನ್ನ ತರಿಸಿಕೊಂಡು ಸಿದ್ಧಪಡಿಸಿತ್ತು. 20 ಲೀಟರ್ ಭಾರವನ್ನ ಹೊತ್ತೊಯ್ಯುವ ರೀತಿಯಲ್ಲಿ ಡ್ರೋನ್ ಸಿದ್ಧಪಡಿಸಿ, ಇದನ್ನ ಸಹ ಕೃಷಿ ವಿವಿ ಆವರಣದಲ್ಲಿನ ಬೆಳದ ಕಡಲೆ, ಶೇಂಗಾ, ಭತ್ತದ ಬೆಳೆಗಳಿಗೆ ಸಿಂಪಡಣೆ ಪ್ರಾಯೋಗಿಕ ಪರೀಕ್ಷೆ ಮಾಡಿತ್ತು. ಇದರಲ್ಲಿ ಯಶಸ್ಸು ಕಂಡ ಬಳಿಕ ರೈತರಿಗೆ ಉಪಯೋಗಿಸಲು ಸರ್ಕಾರಕ್ಕೆ ಪ್ರಸ್ತಾವನೆಯನ್ನು ಕೃಷಿ ವಿವಿಯಿಂದ ಸಲ್ಲಿಸಲಾಯಿತು.