ರಾಯಚೂರು:ಕಾಂಗ್ರೆಸ್ನ ರಾಹುಲ್ ಗಾಂಧಿ ತಮ್ಮ ಆಸ್ತಿತ್ವಕ್ಕಾಗಿ ಜೋಡೋ ಯಾತ್ರೆ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಲೇವಡಿ ಮಾಡಿದ್ದಾರೆ. ರಾಯಚೂರು ತಾಲೂಕಿನ ಗಿಲ್ಲೆಸೂಗೂರು ಗ್ರಾಮದಲ್ಲಿ ಬಿಜೆಪಿಯಿಂದ ಆಯೋಜಿಸಿರುವ ಜನಸಂಕಲ್ಪ ಯಾತ್ರೆಯಲ್ಲಿ ಭಾಗವಹಿಸಲು ಆಗಮಿಸುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದರು.
ರಾಹುಲ್ ಗಾಂಧಿ ಅವರಿಗೆ ತಮ್ಮ ಅಸ್ತಿತ್ವ ಕಳೆದುಕೊಳ್ಳುವ ಭೀತಿ ಎದುರಾಗಿದೆ. ಹೀಗಾಗಿ ಭಾರತ್ ಜೋಡೋ ಪಾದಯಾತ್ರೆ ಮಾಡುತ್ತಿದ್ದಾರೆ. ಬಿಜೆಪಿಯಿಂದ ನಡೆಯುತ್ತಿರುವ ಜನಸಂಕಲ್ಪ ಯಾತ್ರೆಗೂ, ಜೋಡೋ ಯಾತ್ರೆಗೂ ಸಂಬಂಧವಿಲ್ಲ. ಅವರು ಏನು ಮಾಡುತ್ತಿದ್ದಾರೆ ನಮ್ಮಗೆ ಗೊತ್ತಿಲ್ಲ. ನಾವು ನೇರವಾಗಿ ಜನರ ಬಳಿ ಹೋಗುತ್ತಿದ್ದೇವೆ ಎಂದರು.
ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರದಿಂದ ಜನಸಂಕಲ್ಪ ಯಾತ್ರೆ ಇಂದಿನಿಂದ ಆರಂಭಿಸಲಾಗುತ್ತಿದ್ದು, 50ಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ ಯಾತ್ರೆ ಮಾಡಲಿದ್ದೇವೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಜಾರಿಗೆ ತಂದಿರುವ ಯೋಜನೆಗಳನ್ನು ಜನರಿಗೆ ತಿಳಿಸುತ್ತೇವೆ. ಸರ್ಕಾರದ ಕಲ್ಯಾಣ ಕಾರ್ಯಕ್ರಮಗಳನ್ನು ಇಟ್ಟು ಜನಾದೇಶವನ್ನು ಪಡೆಯುತ್ತೇವೆ. ಅಲ್ಲದೇ ಬಿಜೆಪಿ ಮತ್ತೆ ರಾಜ್ಯ ಅಧಿಕಾರ ಚುಕ್ಕಾಣಿ ಹಿಡಿಯುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.