ರಾಯಚೂರು:ವಿದ್ಯುತ್ ಸ್ಪರ್ಶಿಸಿ ಸರ್ಕಾರಿ ಕ್ವಾರಂಟೈನ್ನಲ್ಲಿದ್ದ ವ್ಯಕ್ತಿಯೊಬ್ಬ ಮೃತಪಟ್ಟಿರುವ ಘಟನೆ ಜಿಲ್ಲೆಯ ಗುಂಜಳ್ಳಿ ಗ್ರಾಮದಲ್ಲಿ ನಡೆದಿದೆ.
ವಿದ್ಯುತ್ ಸ್ಪರ್ಶಿಸಿ ಕ್ವಾರಂಟೈನ್ನಲ್ಲಿದ್ದ ವ್ಯಕ್ತಿ ಸಾವು ಬಡಯ್ಯ ನರಸಪ್ಪ ಮೃತ ವ್ಯಕ್ತಿ. ನಿನ್ನೆ ಜಿಲ್ಲೆಯಲ್ಲಿ ಮಳೆ ಗಾಳಿಗೆ ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿದ್ದವು. ಗುಂಜಳ್ಳಿ ಗ್ರಾಮದ ಸರ್ಕಾರಿ ಶಾಲೆ ಆವರಣದಲ್ಲಿ ವಿದ್ಯುತ್ ಕಂಬದಿಂದ ತಂತಿಗಳು ನೆಲದ ಮೇಲೆ ಬಿದ್ದಿದ್ದವು. ಪರಿಣಾಮ ಕ್ವಾರಂಟೈನ್ ಕೇಂದ್ರದಲ್ಲಿನ ವಿದ್ಯುತ್ ತಂತಿ ಸ್ಪರ್ಶದಿಂದಾಗಿ ಈತ ಸಾವನ್ನಪ್ಪಿದ್ದಾನೆ ಎನ್ನಲಾಗುತ್ತಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ರಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.
ಮೃತ ವ್ಯಕ್ತಿಯ ಕ್ವಾರಂಟೈನ್ ವಿವರ:
ಮೃತ ವ್ಯಕ್ತಿ ಕೂಲಿ ಕೆಲಸಕ್ಕಾಗಿ ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಗೆ ವಲಸೆ ಹೋಗಿದ್ದ. ಕೊರೊನಾ, ಲಾಕ್ಡೌನ್ಗೆ ಸಿಲುಕಿ ಕೆಲ ದಿನಗಳ ಹಿಂದೆ ಸ್ವಗ್ರಾಮಕ್ಕೆ ಆಗಮಿಸಿದ್ದ. ಜಿಲ್ಲಾಡಳಿತ ಈತನನ್ನು ಕ್ವಾರಂಟೈನ್ ಮಾಡಿತ್ತು. ಈತ ತಂಗಿದ್ದ ಗುಂಜಳ್ಳಿ ಗ್ರಾಮದ ಶಾಲೆಯ ಪಕ್ಕದಲ್ಲಿ ಮೊರಾರ್ಜಿ ವಸತಿ ಶಾಲೆಯ ಕಟ್ಟಡ ಕಾಮಗಾರಿ ನಡೆಯುತ್ತಿದ್ದು, ಈ ಶಾಲೆಗೆ ಹೈಸ್ಕೂಲ್ ಮೂಲಕ ವಿದ್ಯುತ್ ವೈರ್‌ನ್ನು ಬಲಿಸುಗಳ(ಕಟ್ಟಿಗೆ) ಮೂಲಕ ಎಳೆಯಲಾಗಿದೆ. ನಿನ್ನೆ ಮಳೆ, ಗಾಳಿಯಿಂದ ವಿದ್ಯುತ್ ತಂತಿಗಳು ಕೆಳಗೆ ಬಿದ್ದಿದ್ದವು. ಇಂದು ಬಡಯ್ಯ ಮೂತ್ರ ವಿಸರ್ಜನೆಗೆ ತೆರಳಿದ್ದ ವೇಳೆ ವಿದ್ಯುತ್ ತಂತಿ ಸ್ಪರ್ಶಿಸಿ ಮೃತಪಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.
ಘಟನೆಗೆ ಸಂಬಂಧ ಆಕ್ರೋಶ ವ್ಯಕ್ತಪಡಿಸಿರುವ ಮೃತನ ಕುಟುಂಬಸ್ಥರು ಸಂಬಂಧಿಸಿದ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಯರಗೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.