ಕರ್ನಾಟಕ

karnataka

ETV Bharat / state

ಟ್ರಾಕ್ಟರ್‌ನಲ್ಲಿ ಮರಳು ಸಾಗಿಸುತ್ತಿದ್ದ ವ್ಯಕ್ತಿಗೆ ಪಿಎಸ್​ಐನಿಂದ ಥಳಿತ ಆರೋಪ - Maski Police Station

ಟ್ರ್ಯಾಕ್ಟರ್​ನಲ್ಲಿ ಮರಳು ಸಾಗಿಸುತ್ತಿದ್ದ ವ್ಯಕ್ತಿಯ ಮೇಲೆ ಮಸ್ಕಿ ಠಾಣೆಯ ಪಿಎಸ್​ಐವೊಬ್ಬರು ಮನಬಂದಂತೆ ಥಳಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ನೀರುಪಾದಿ ನಾಯಕ
ನೀರುಪಾದಿ ನಾಯಕ

By ETV Bharat Karnataka Team

Published : Sep 23, 2023, 7:59 AM IST

ಹಲ್ಲೆಗೊಳಗಾದ ವ್ಯಕ್ತಿ ನೀರುಪಾದಿ ನಾಯಕ ಅವರು ಮಾತನಾಡಿದ್ದಾರೆ

ರಾಯಚೂರು:ಟ್ರಾಕ್ಟರ್‌ನಲ್ಲಿ ಹಳ್ಳದ ಮರಳು ಸಾಗಿಸುತ್ತಿದ್ದ ವ್ಯಕ್ತಿಯ ಮೇಲೆ ಮಸ್ಕಿ ಠಾಣೆಯ ಪಿಎಸ್‌ಐವೊಬ್ಬರು ಬಾಸುಂಡೆ ಬರುವಂತೆ‌ ಥಳಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಬಗ್ಗೆ ಹಲ್ಲೆಗೊಳಗಾದ ವ್ಯಕ್ತಿ ಹಾಗೂ ಕುಟುಂಬಸ್ಥರು ಆರೋಪಿಸಿದ್ದಾರೆ.

ಥಳಿತಕ್ಕೊಳಗಾದ ಟ್ರ್ಯಾಕ್ಟರ್ ಚಾಲಕ ಸಿಂಗನಾಳ ಕ್ಯಾಂಪ್ ನಿವಾಸಿ ನಿರುಪಾದಿ ನಾಯಕ ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹಳ್ಳದಿಂದ ಸಂಬಂಧಿಕರ ಮನೆಗೆ ಮರಳು ಸಾಗಾಟದ ವೇಳೆ ಅಕ್ರಮ ಮರಳು ಸಾಗಣೆ ಆರೋಪದ ಮೇಲೆ ಹಿಡಿದು ಮನಸೋ ಇಚ್ಛೆ ಥಳಿಸಿದ್ದಾರೆ ಅಂತ ನಿರುಪಾದಿ ನಾಯಕ ಆರೋಪಿಸಿದ್ದಾರೆ. ಅಕ್ರಮವೆಸಗಿದ್ದರೆ ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳ‌ಬೇಕಿತ್ತು. ಆದರೆ ಹಲ್ಲೆ ನಡೆಸಿ ಪಿಎಸ್‌ಐ ಗೂಂಡಾವರ್ತನೆ ತೋರಿದ್ದಾರೆ ಎಂದು ಕುಟುಂಬಸ್ಥರು ಸಹ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮರಳು ಸಾಗಾಟಕ್ಕೆ ಮಾಮೂಲಿ ನೀಡಬೇಕೆಂದು ಪಿಎಸ್‌ಐ ಬೇಡಿಕೆಯಿಟ್ಟಿದ್ದು, ಹಣ ನೀಡದಿರುವುದಕ್ಕೆ ಈ ರೀತಿಯಾಗಿ ವರ್ತಿಸಿ ಮನಬಂದಂತೆ ಹೊಡೆದಿದ್ದಾರೆ ಅಂತ ಆರೋಪಿಸಿದ್ದಾರೆ. ಪಿಎಸ್‌ಐ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ಹಲ್ಲೆಗೊಳಗಾದ ವ್ಯಕ್ತಿಯ ಕುಟುಂಬಸ್ಥರು ಹಾಗೂ ಸ್ಥಳೀಯ ಹೋರಾಟಗಾರರು ಒತ್ತಾಯಿಸಿದ್ದಾರೆ.

''ನಮ್ಮ ಹೊಲದ ಬಳಿ ಒಂದು ಹಳ್ಳವಿದೆ. ಅಲ್ಲಿಂದ ಒಂದು ಟ್ರಿಪ್​ ಮರಳನ್ನು ಸಾಗಿಸಲು ಹೋಗಿದ್ದೆ. 7:30 ರ ಸಮಯದಲ್ಲಿ ಮಳೆ ಬರುತ್ತಿತ್ತು. ಆ ವೇಳೆ ಗೆಅಲ್ಲಿಗೆ ಪೊಲೀಸ್ ಸಿಬ್ಬಂದಿವೊಬ್ಬರು ಬಂದು, ನನ್ನನ್ನ ಟ್ರ್ಯಾಕ್ಟರ್​ನಿಂದ ಕೆಳಗೆ ಇಳಿ ಎಂದರು. ನಂತರ ಒಂದೂವರೆ ಮಾರು ಉದ್ದದ ಪೈಪ್​ ಮೂಲಕ ಥಳಿಸಿದರು. ಆಗ ನಾನು ಕೂಗಾಡಿದೆ. ಅಲ್ಲಿದ್ದ ಪೊಲೀಸರಿಬ್ಬರು ಬಿಡಿಸಲು ಬಂದರೂ ಕೂಡಾ ಪಿಎಸ್​ಐ ಬಿಡಲಿಲ್ಲ. 7:30 ರಿಂದ 12 ಗಂಟೆವರೆಗೆ ನನಗೆ ಹೊಡೆದಿದ್ದಾರೆ. ಜಾತಿ ನಿಂದನೆ ಮಾಡಿದ್ದಾನೆ'' ಎಂದು ಹಲ್ಲೆಗೊಳಗಾದ ವ್ಯಕ್ತಿ ನೀರುಪಾದಿ ನಾಯಕ ಆರೋಪಿಸಿದ್ದಾರೆ.

ಈ ಕುರಿತಂತೆ ರಾಯಚೂರು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನಿಖಿಲ್ ಬಿ ಅವರಿಗೆ ದೂರವಾಣಿ ಮೂಲಕ ಸಂಪರ್ಕಿಸಿದಾಗ, ಈ ಘಟನೆ ಕುರಿತಂತೆ ಮಾಹಿತಿ ಗಮನಕ್ಕೆ ಬಂದಿದೆ. ಈ ಕುರಿತು ತನಿಖೆ ಮಾಡುವಂತೆ ಆದೇಶ ಮಾಡಲಾಗಿದೆ. ವರದಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಇನ್ನು ಘಟನೆಯನ್ನು ಖಂಡಿಸಿ, ವಿವಿಧ ಸಂಘಟನೆ ಮುಖಂಡರು ಮಸ್ಕಿ ಪೊಲೀಸ್ ಠಾಣೆಯ ಮುಂದೆ ಪ್ರತಿಭಟನೆ ನಡೆಸಿದರು.

ಇದನ್ನೂ ಓದಿ:ಬೈಕ್ ಸವಾರನಿಗೆ ಒದೆಯಲು ಹೋದ ASI ಅಮಾನತು

ABOUT THE AUTHOR

...view details