ರಾಯಚೂರು: ಉತ್ತರ ಪ್ರದೇಶ ಸೇರಿದಂತೆ ದೇಶದಾದ್ಯಂತ ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣಗಳಿಗೆ ಕಡಿವಾಣ ಹಾಕಬೇಕು. ಅಲ್ಲದೆ ತಪ್ಪಿತಸ್ಥ ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಡಾ. ಎಪಿಜೆ ಅಬ್ದುಲ್ ಕಲಾಂ ನಾಗರಿಕ ಕ್ಷೇಮಾಭಿವೃದ್ಧಿ ಸಂಘ ಹಾಗೂ ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಶನ್ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.
ಹಥ್ರಾಸ್ ಅತ್ಯಾಚಾರ ಪ್ರಕರಣ ಖಂಡಿಸಿ ಪ್ರತಿಭಟನೆ
ಉತ್ತರ ಪ್ರದೇಶದ ಹಥ್ರಾಸ್ನಲ್ಲಿ ನಡೆದ ಪ್ರಕರಣ ಹಾಗೂ ದೇಶದಾದ್ಯಂತ ನಡೆಯುತ್ತಿರುವ ಅತ್ಯಾಚಾರ ಘಟನೆಗಳನ್ನು ಖಂಡಿಸಿ ಡಾ. ಎಪಿಜೆ ಅಬ್ದುಲ್ ಕಲಾಂ ನಾಗರಿಕ ಕ್ಷೇಮಾಭಿವೃದ್ಧಿ ಸಂಘ ಹಾಗೂ ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಶನ್ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.
ನಗರದ ಅಂಬೇಡ್ಕರ್ ವೃತ್ತದಲ್ಲಿ ಡಾ. ಎಪಿಜೆ ಅಬ್ದುಲ್ ಕಲಾಂ ನಾಗರಿಕ ಕ್ಷೇಮಾಭಿವೃದ್ಧಿ ಸಂಘ ಪ್ರತಿಭಟಿಸಿದರೆ, ಜಿಲ್ಲಾಧಿಕಾರಿ ಕಚೇರಿ ಮುಂದೆ ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಶನ್ ಪದಾಧಿಕಾರಿಗಳು ಪ್ರತಿಭಟಿಸಿದರು.
ಉತ್ತರ ಪ್ರದೇಶದ ಹಥ್ರಾಸ್ನಲ್ಲಿ ನಡೆದ ಅತ್ಯಾಚಾರ ಪ್ರಕರಣ ಪೈಶಾಚಿಕ ಕೃತ್ಯವಾಗಿದ್ದು, ಅತ್ಯಾಚಾರಗೈದು ಸಂತ್ರಸ್ತೆಯ ನಾಲಿಗೆ ಕತ್ತರಿಸಿ, ಬೆನ್ನು ಮೂಳೆ ಮುರಿದಿರುವ ಹೃದಯ ವಿದ್ರಾವಕ ಘಟನೆಯಿಂದ ಇಡೀ ನಾಗರಿಕ ಸಮಾಜವೇ ತಲೆತಗ್ಗಿಸುವಂತಾಗಿದೆ. ದೇಶದಲ್ಲಿ ನಿರ್ಭಯಾ ಪ್ರಕಣದಿಂದ ಹಿಡಿದು ಇಲ್ಲಿಯವರೆಗೂ ಅದೆಷ್ಟೋ ಹೆಣ್ಣುಮಕ್ಕಳು ಇಂತಹ ರಾಕ್ಷಸ ಕೃತ್ಯಗಳಿಗೆ ಬಲಿಯಾಗಿದ್ದಾರೆ. ಅತ್ಯಾಚಾರ ಪ್ರಕರಣಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಉತ್ತರ ಪ್ರದೇಶ ಸರ್ಕಾರವನ್ನು ವಜಾಗೊಳಿಸಿ ರಾಷ್ಟ್ರಪತಿ ಆಡಳಿತ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.