ರಾಯಚೂರು: ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ತೆಲುಗು ದೇಶಂ ಪಕ್ಷದ ಮುಖ್ಯಸ್ಥ ಚಂದ್ರಬಾಬು ನಾಯ್ಡು ಬಂಧನ ಖಂಡಿಸಿ ಸಿಂಧನೂರಿನಲ್ಲಿ ಪ್ರತಿಭಟನೆ ನಡೆಯಿತು. ಸಿಂಧನೂರು ಪಟ್ಟಣದ ತಾಲೂಕು ಕ್ರೀಡಾಂಗಣದಿಂದ ಬಸವ ವೃತ್ತದಿಂದ ಮಿನಿ ವಿಧಾನಸೌಧದವರೆಗೆ ಪ್ರತಿಭಟನೆ ಮೆರವಣಿಗೆ ನಡೆಸಿ ಬಳಿಕ ಪ್ರತಿಭಟನಾಕಾರರು ಬಹಿರಂಗ ಸಭೆ ನಡೆಸಿದರು.
ಪ್ರತಿಭಟನೆಯ ಬಹಿರಂಗಸಭೆಯಲ್ಲಿ ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಮಾತನಾಡಿ, 75 ವರ್ಷಗಳಿಂದ ಪ್ರಜಾತಂತ್ರ ವ್ಯವಸ್ಥೆಯಲ್ಲಿ ನಾವೆಲ್ಲ ಬದುಕುತ್ತಿದ್ದೇವೆ. ಡಾ.ಅಂಬೇಡ್ಕರ್ ಅವರು ರಚಿಸಿದ ಸಂವಿಧಾನ ಎಲ್ಲಾ ಭಾರತೀಯರಿಗೆ ಪವಿತ್ರ ಗ್ರಂಥವಾಗಿದೆ. ಆದರೆ ಪ್ರಸ್ತುತ ದಿನಗಳಲ್ಲಿ ರಾಜಕೀಯ ವ್ಯವಸ್ಥೆಯ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎನ್ನುವುದು ಕಳವಳಕಾರಿಯಾಗಿದೆ. ಪ್ರಜಾಪ್ರಭುತ್ವ, ಸಂವಿಧಾನ ಮೀರಿ ಆಂಧ್ರಪ್ರದೇಶದಲ್ಲಿ ದುರ್ನಡತೆಯ ಆಡಳಿತ ನಡೆಯುತ್ತಿರುವುದು ಸರಿಯಾದುದ್ದಲ್ಲ. ರಾಜಕಾರಣದಲ್ಲಿ ಯಾರೂ ಶಾಶ್ವತ ಅಲ್ಲ. ದ್ವೇಷ ಮತ್ತು ದುರ್ನಡತೆಯ ಆಡಳಿತ ರಾಜಕೀಯ ಮುಖಂಡರಿಗೆ ಶೋಭೆ ತರುವುದಿಲ್ಲ. ನಾಯ್ಡು ಬಂಧನ ಖಂಡನೀಯವಾಗಿದೆ. ಇಲ್ಲಿಯವರು ಮಾಡುತ್ತಿರುವ ಹೋರಾಟಕ್ಕೆ ಸದಾ ಬೆಂಬಲ ಇರುತ್ತದೆ ಎಂದರು.
ಮಾಜಿ ಮಂತ್ರಿ ವೆಂಕಟರಾವ್ ನಾಡಗೌಡ ಮಾತನಾಡಿ, ಆಂಧ್ರಪ್ರದೇಶದಲ್ಲಿ ತುಘಲಕ್ ದರ್ಬಾರ್ ನಡೆಯುತ್ತಿದೆ. ಸಾಮಾನ್ಯ ವ್ಯಕ್ತಿಯನ್ನು ಬಂಧಿಸಬೇಕಾದರೆ ಅದರದ್ದೆ ಆದ ನಿರ್ದೇಶನ ಮತ್ತು ನಿಯಮಗಳಿವೆ. ಆದರೆ ಮಾಜಿ ಮುಖ್ಯಮಂತ್ರಿ ಚಂದ್ರುಬಾಬು ನಾಯ್ಡು ಅವರನ್ನು ಅಲ್ಲಿನ ಗರ್ವನರ್ ಆದೇಶವಿಲ್ಲದೆ ಅಲ್ಲಿನ ಸರ್ಕಾರ ಬಂಧಿಸಿರುವುದು ಖಂಡನೀಯವಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಿದ್ಧಾಂತದ ಮೇಲೆ ರಾಜಕಾರಣ ಮಾಡಬೇಕೆ ಹೊರತು. ದ್ವೇಷದಿಂದ ರಾಜಕಾರಣ ಮಾಡಬಾರದು ಎಂದರು.