ರಾಯಚೂರು:ರಾಜ್ಯದಲ್ಲಿ ಎರಡು ವಿಧಾನಸಭಾ ಕ್ಷೇತ್ರ ಉಪಚುನಾವಣೆ ಯಾವುದೇ ಕ್ಷಣದಲ್ಲಿ ಎದುರಾಗಬಹುದು ಎಂದು ರಾಜಕೀಯ ಪಕ್ಷಗಳೆರಡು ದಿನಾಂಕ ಘೋಷಣೆಗೂ ಮುನ್ನವೇ ಅಬ್ಬರದ ಪ್ರಚಾರಕ್ಕೆ ಮುಂದಾಗಿದ್ದರು. ಆದರೆ ಚುನಾವಣಾ ಆಯೋಗ ಗ್ರಾಮ ಪಂಚಾಯಿತಿ ಚುನಾವಣೆ ಘೋಷಣೆ ಮಾಡಿದ್ದು, ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ವಿಳಂಬವಾಗಲಿದೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ. ಈ ಕುರಿತು ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ರಾಜ್ಯದಲ್ಲಿ ಮೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಮುಗಿದ ಬಳಿಕ, ಬಸವಕಲ್ಯಾಣ, ಮಸ್ಕಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಎದುರಾಗುತ್ತವೆ ಎನ್ನುವ ನಿರೀಕ್ಷೆಯಿತ್ತು. ಈ ನಿರೀಕ್ಷೆಯಂತೆ ರಾಷ್ಟ್ರೀಯ ಪಕ್ಷಗಳೆರಡು ಉಪಚುನಾವಣೆ ದಿನಾಂಕ ಘೋಷಣೆ ಮುನ್ನವೇ ಅಬ್ಬರದ ಪ್ರಚಾರ ನಡೆಸುವ ಮೂಲಕ ಉಪಕದನದ ರಣಕಹಳೆ ಮೊಳಗಿಸಿದ್ದರು. ಆದರೆ ಇದೀಗ ಚುನಾವಣೆ ಆಯೋಗ ರಾಜ್ಯದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಗಳ ದಿನಾಂಕ ಘೋಷಣೆ ಮಾಡುವ ಮೂಲಕ ಬೈ ಎಲೆಕ್ಷನ್ ವಿಳಂಬವಾಗುವ ಸಾಧ್ಯತೆಯಿದೆ ಎದುರಾಗಿದೆ.
ರಾಯಚೂರು ಜಿಲ್ಲೆಯ ಮಸ್ಕಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ದಿನ ದಿನಕ್ಕೆ ರಂಗೇರುತ್ತಿತ್ತು. ಆಡಳಿತಾರೂಢ ಬಿಜೆಪಿ ಸಚಿವರು, ಮುಖಂಡರು ಸಮಾವೇಶಗಳು, ಕಾರ್ಯಕರ್ತರ ಸಭೆಯನ್ನ ಆಯೋಜಿಸುವ ಮೂಲಕ ನಿಯೋಜಿತ ಅಭ್ಯರ್ಥಿ ಪ್ರತಾಪ್ ಗೌಡ ಪಾಟೀಲ್ ಪರವಾಗಿ ಪ್ರಚಾರ ನಡೆಸುತ್ತಿದ್ದಾರೆ. ವಿಪಕ್ಷವಾಗಿರುವ ಕಾಂಗ್ರೆಸ್ ಸಹ ಪ್ರಚಾರದಿಂದ ಹಿಂದುಳಿಯದೆ ಕಳೆದ ಬಾರಿ ಬಿಜೆಪಿಯಿಂದ ಸ್ಪರ್ಧಿಸಿ ಅಲ್ಪಮತಗಳಿಂದ ಪರಾಜಿತಗೊಂಡಿದ್ದ ಆರ್.ಬಸವನಗೌಡ ತುರುವಿಹಾಳರನ್ನು ಕಾಂಗ್ರೆಸ್ಗೆ ತರುವ ಮೂಲಕ, ಮಸ್ಕಿಯಲ್ಲಿ ಬೃಹತ್ ಸಮಾವೇಶ ನಡೆಸಿ ಪ್ರಚಾರ ನಡೆಸುತ್ತಿದ್ದರು.