ರಾಯಚೂರು:ನಗರದಲ್ಲಿ ಬಿಡಾಡಿ ದನಗಳ ಹಾವಳಿಯಿಂದ ಸಾರ್ವಜನಿಕರಿಗೆ ಹಾಗೂ ವಾಹನ ಸವಾರರಿಗೆ ಸಮಸ್ಯೆ ಉಂಟಾಗುತ್ತಿದ್ದು, ಈ ದನಗಳನ್ನು ಹಿಡಿದು ನಗರದಲ್ಲಿರುವ ಬಯಲು ರಂಗ ಮಂದಿರದ ಬಳಿ ಕೂಡಿ ಹಾಕಲಾಗಿದೆ.
ದನಗಳ ಹಾವಳಿ ಹೆಚ್ಚಿದ್ದರಿಂದ ನಗರಸಭೆ ಹಾಗೂ ಪೊಲೀಸ್ ಇಲಾಖೆ ವತಿಯಿಂದ ಈ ಕಾರ್ಯ ಮಾಡಲಾಗಿತ್ತು. ಕಳೆದ ಕೆಲ ದಿನಗಳ ಹಿಂದೆ ಈ ಬಗ್ಗೆ ಈಟಿವಿ ಭಾರತ್ನಲ್ಲಿ "ರಾಯಚೂರಿನ ರಸ್ತೆಗಳಲ್ಲಿ ಬಿಡಾಡಿ ದನಗಳದ್ದೇ ಕಾರುಬಾರು, ಯಾವುದೇ ವಾಹನ ಬಂದ್ರೂ ಡೋಂಟ್ ಕೇರ್ " ಎಂಬ ವರದಿ ಪ್ರಕಟವಾಗಿದ್ದು, ಎಚ್ಚೆತ್ತ ಅಧಿಕಾರಿಗಳು ಬಿಡಾಡಿ ದನಗಳನ್ನು ಬಯಲು ರಂಗ ಮಂದಿರದ ಬಳಿ ಕೂಡಿ ಹಾಕಿದ್ದಾರೆ.
ಈ ಕಾರ್ಯಾಚರಣೆಯು ಎಸ್ಪಿ ಸಿ ಬಿ ವೇದಮೂರ್ತಿ ಅವರ ನೇತೃತ್ವದಲ್ಲಿ ನಡೆದಿದೆ. ಈ ಬಗ್ಗೆ ಮಾತನಾಡಿದ ವೇದಮೂರ್ತಿ, ನಗರದಲ್ಲಿ 2000 ಬಿಡಾಡಿ ದನಗಳು ಸಾರ್ವಜನಿಕರ ವಾಹನ ಸವಾರರಿಗೆ ತೀವ್ರ ತೊಂದರೆ ಉಂಟು ಮಾಡುತ್ತಿದ್ದವು. ಸಾರ್ವಜನಿಕರ ದೂರು ಹಾಗೂ ಮಾಧ್ಯಮಗಳಲ್ಲಿ ಪ್ರಸಾರವಾದ ಸುದ್ದಿಯನ್ನು ಗಮನದಲ್ಲಿಟ್ಟುಕೊಂಡು ದಾಳಿ ಮಾಡಿ ದನಗಳನ್ನು ಕೂಡಿ ಹಾಕಲಾಗಿದೆ. ಮಾಲೀಕರಿಗೆ ಒಂದುವಾರದ ಕಾಲಾವಕಾಶ ನೀಡಲಾಗಿದೆ. ಅವರ ಆಧಾರ್ ಕಾರ್ಡ್ ಹಾಗೂ ಇತರೆ ದಾಖಲೆಗಳನ್ನು ಪರಿಶೀಲಿಸಿ ಸಾವಿರ ರೂಪಾಯಿ ಅಥವಾ ಸೂಕ್ತವಾದ ದಂಡವನ್ನು ವಿಧಿಸಿ ದನಗಳನ್ನು ಮರಳಿ ಕೊಡಲಾಗುವುದು. ಒಂದು ವೇಳೆ ಮಾಲೀಕರು ಬರದಿದ್ದರೆ ಅಂತಹ ದನಗಳನ್ನು ಮಾರಾಟ ಮಾಡಲಾಗುವುದು ಎಂದರು.
ನಗರಸಭೆಯ ಪೌರಾಯುಕ್ತ ಮಲ್ಲಿಕಾರ್ಜುನ್ ಗೋಪಿ ಶೆಟ್ಟಿ ಪ್ರತಿಕ್ರಿಯಿಸಿ, ಈ ಹಿಂದೆ ಹಲವಾರು ಬಾರಿ ನಗರಸಭೆಯಿಂದ ಬಿಡಾಡಿ ದನಗಳ ಹಾವಳಿ ತಡೆಗೆ ಮಾಲೀಕರಿಗೆ ಸೂಚನೆ ನೀಡಿದ್ದೆವು. ಆದರೂ ರಸ್ತೆಗಳಿಗೆ ದನಗಳನ್ನು ಬಿಡಲಾಗುತ್ತಿತ್ತು. ಪೊಲೀಸ್ ಇಲಾಖೆಯ ಸಹಕಾರದಿಂದ ದನಗಳನ್ನು ಕೂಡಿ ಹಾಕಲಾಗಿದೆ. ಕೂಡಿಹಾಕಿದ ದನಗಳಿಗೆ ನಗರಸಭೆಯಿಂದ ಕುಡಿಯುವ ನೀರು, ಮೇವು ಇತರೆ ಸೌಲಭ್ಯ ನೀಡಿ ಉಪಚಾರ ಮಾಡುತ್ತೇವೆ ಎಂದರು.