ರಾಯಚೂರು: ಕೇಂದ್ರ ಸರ್ಕಾರ ಇತ್ತೀಚೆಗೆ ಭಾರತೀಯ ಜೀವ ವಿಮಾ ನಿಗಮದಲ್ಲಿನ ತನ್ನ ಬಂಡವಾಳದ ಸ್ಪಲ್ಪ ಭಾಗವನ್ನು ಷೇರು ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ಭಾಗವಾಗಿ ಐಪಿಒ(Initial Public Offering) ಪ್ರಕ್ರಿಯೆ ಪ್ರಾರಂಭಿಸ ಹೊರಟಿರುವುದಕ್ಕೆ ವಿರೋಧ ವ್ಯಕ್ತವಾಗಿದೆ.
ಎಲ್ಐಸಿಯ ಐಪಿಒ ಪ್ರಕ್ರಿಯೆ ಕೈಬಿಡುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯ - ಎಲ್ಐಸಿ
ದೇಶದ ಅಭಿವೃದ್ಧಿಗೆ ಅಪಾರ ಸಂಪನ್ಮೂಲ ಅವಶ್ಯಕತೆ ಇರುವ ಈ ಕಾಲಘಟ್ಟದಲ್ಲಿ ಆರ್ಥಿಕತೆ ಭದ್ರಪಡಿಸುವಲ್ಲಿ ಐಪಿಒ ವಿಮಾ ಕಂಪನಿಯ ಧ್ಯೇಯಕ್ಕೆ ಧಕ್ಕೆಯಾಗಲಿದ್ದು, ಕೂಡಲೇ ಕೇಂದ್ರ ಸರ್ಕಾರ ಎಲ್ಐಸಿ ಯ ಐಪಿಒ ಪ್ರಕ್ರಿಯೆ ಕೈಬಿಡಬೇಕು ಎಂದು ರಾಯಚೂರಿಲ್ಲಿ ವಿಮಾ ನೌಕರರ ಸಂಘ ಒತ್ತಾಯಿಸಿದೆ.

ಈ ಕುರಿತು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಮಾ ನೌಕರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ. ರವಿ, ಐ.ಪಿ.ಒ ಪ್ರಕ್ರಿಯೆ ಮೂಲಕ ಸರ್ಕಾರ ವಿಶ್ವಾಸನೀಯ ಎಲ್ಐಸಿಯನ್ನು ದುರ್ಬಲಗೊಳಿಸಲು ಹೊರಟಿದೆ ಎಂದು ಆರೋಪಿಸಿದ್ರು. 1956ರಲ್ಲಿ ಸರ್ಕಾರದ ₹5 ಕೋಟಿ ಬಂಡವಾಳದೊಂದಿಗೆ ಆರಂಭವಾದ ಎಲ್ಐಸಿ ಇಂದು ₹26000 ಕೋಟಿ ರೂ ಅಧಿಕ ಲಾಭದಿಂದ ₹ 32 ಲಕ್ಷ ಕೋಟಿಗೂ ಮೀರಿ ಆಸ್ತಿಯನ್ನು ಹೊಂದಿದ್ದು, 40 ಕೋಟಿಗೂ ಅಧಿಕ ಪಾಲಿಸಿದಾರರಿದ್ದಾರೆ ಎಂದರು.
1956ರ ಮುಂಚೆ 245 ಖಾಸಗಿ ಕಂಪನಿಗಳನ್ನು ಒಗ್ಗೂಡಿಸಿ ವಿಮಾ ಉದ್ಯಮವನ್ನು ರಾಷ್ಟ್ರೀಕರಣ ಮಾಡುವುದರ ಜೊತೆಗೆ ಎಲ್ಐಸಿ ಸ್ಥಾಪನೆ ಆಯಿತು. ಅವಾಗಿನಿಂದಲೂ ಸಣ್ಣ ಉಳಿತಾಯಗಳನ್ನು ಸಂಗ್ರಹಿಸಿ ಅದನ್ನು ದೀರ್ಘಾವಧಿಯ ಬಂಡವಾಳವನ್ನಾಗಿ ಪರಿವರ್ತಿಸುವುದರ ಜೊತೆಗೆ ದೇಶದ ಆರ್ಥಿಕ ಸಾರ್ವಭೌಮತೆಗೆ ಅಮೂಲ್ಯ ಕಾಣಿಕೆ ಸಲ್ಲಿಸಿ ಪಾಲಿಸಿದಾರರಿಗೆ ಹಾಗೂ ಅವರ ಹಣಕ್ಕೆ ಭದ್ರತೆಯನ್ನು ಕಲ್ಪಿಸುವ ಸಂಸ್ಥೆಯ ಮೂಲ ಉದ್ದೇಶಕ್ಕೆ ಈ ಐ. ಪಿ. ಒ. ಪ್ರಕ್ರಿಯೆ ಧಕ್ಕೆ ತರಲಿದೆ ಎಂದು ಎಂ ರವಿ ಕಳವಳವನ್ನು ವ್ಯಕ್ತಪಡಿಸಿದ್ದಾರೆ.