ರಾಯಚೂರು:ಗೌರಿ ಗಣೇಶ ಹಬ್ಬದ ಸಂದರ್ಭದಲ್ಲಿ ಪಿಒಪಿ ಗಣೇಶ ಹಾಗೂ ಬೃಹದಾಕಾರದ ಡಿಜೆ ಸೆಟ್ಗಳಿಂದ ಕೂಡಿದ ಮೆರವಣಿಗೆಗೆ ಕಡಿವಾಣ ಹಾಕಲು ಜಿಲ್ಲಾ ಪೊಲೀಸ್ ಇಲಾಖೆ ಉಪಾಯ ಮಾಡಿದ್ದು, ಇದಕ್ಕಾಗಿ ವಿಡಿಯೋ ಸಂದೇಶವೊಂದನ್ನು ಬಿಡುಗಡೆ ಮಾಡಿದೆ.
ಗೌರಿ ಗಣೇಶ ಹಬ್ಬವನ್ನು ಕೋಮು ಸೌಹಾರ್ದತೆ ಹಾಗೂ ಪರಿಸರ ಸ್ನೇಹಿಯಾಗಿ ಆಚರಿಸುವ ಸಲುವಾಗಿ ಡಿಜೆ ಬ್ಯಾನ್ ಮಾಡಿ ನ್ಯಾಯಾಲಯ ಆದೇಶ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ಡಿ.ಜೆ ಮಾಲೀಕರಿಗೆ ಹೆಚ್ಚಿನ ಡಿಜೆ ಸೆಟ್ ಗಳು ಮಾರಾಟ ಮಾಡದಂತೆ ಪೊಲೀಸ್ ಇಲಾಖೆ ನೋಟಿಸ್ ನೀಡಿದ್ದು, ಉಲ್ಲಂಘನೆ ಮಾಡಿದ್ದಲ್ಲಿ ಡಿಜೆ ಜಪ್ತಿ ಮಾಡಿ ಕ್ರಮ ಕೈಗೊಳ್ಳಲಾಗುವುದು ಎಂದು ವಿಡಿಯೋ ಸಂದೇಶದಲ್ಲಿ ತಿಳಿಸಲಾಗಿದೆ.
ರಾಯಚೂರು ಎಸ್ಪಿ ಡಾ. ಸಿಬಿ.ವೇದಮೂರ್ತಿಯಿಂದ ವೀಡಿಯೋ ಸಂದೇಶ ಸ್ವತಃ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ವೇದಮೂರ್ತಿ ವಿಡಿಯೋದಲ್ಲಿ ಮಾತನಾಡಿದ್ದು, ಪರಿಸರ ಕಾಳಜಿಗೆ ಹೆಚ್ಚು ಮಹತ್ವ ಕೊಡುವ ನಿಟ್ಟಿನಲ್ಲಿ ರಾಯಚೂರು ಜಿಲ್ಲಾ ಪೊಲೀಸ್ ಇಲಾಖೆಯಿಂದ 100 ರೈತ ಸ್ನೇಹಿ ಗಣಪ ತಯಾರಿಸಲಾಗಿದೆ. ಅದರಲ್ಲಿ ತುಳಸಿ ಹಾಗೂ ತರಕಾರಿ ಬೀಜ ಹಾಕಲಾಗಿದೆ. ಈ ಗಣಪನನ್ನು ನೀರಲ್ಲಿ ವಿಸರ್ಜನೆ ಮಾಡುವ ಅವಶ್ಯಕತೆಯಿಲ್ಲ. ಹಬ್ಬದ ಬಳಿಕ ಮನೆಯ ಹೂ ಕುಂಡದಲ್ಲಿ ಹಾಕಿದರೆ ಮನೆಗೆ ಉಪಯೋಗವಾಗಲಿದೆ ಹಾಗೂ ಸದಾ ಗಣೇಶನ ಆಶಿರ್ವಾದ ಇರಲಿದೆ ಎಂದು ಹೇಳಿದ್ದಾರೆ. ಜೊತೆಗೆ ಹಬ್ಬವನ್ನು ಶಾಂತಿ ಸುವ್ಯವಸ್ಥೆ ಹಾಗೂ ಪರಿಸರ ಸ್ನೇಹಿಯಾಗಿ ಆಚರಿಸಲು ಪೊಲೀಸ್ ಇಲಾಖೆ ಒತ್ತು ನೀಡಿದ್ದು, ಸಾರ್ವಜನಿಕರು ಕೈ ಜೋಡಿಸಿ ಎಂದು ಮನವಿ ಮಾಡಿದ್ದಾರೆ.
ಪೊಲೀಸ್ ಇಲಾಖೆಯಿಂದ ರಚಿಸಿದ ಈ ವಿಡಿಯೋ ಸಂದೇಶ ಎಲ್ಲರ ವಾಟ್ಸ್ಆ್ಯಪ್, ಫೇಸ್ಬುಕ್ ಹಾಗೂ ಇತರ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಅಗಿದೆ.