ರಾಯಚೂರು:ಹಳೆ ವೈಷಮ್ಯ ಹಾಗೂ ದಾಯಾದಿಗಳ ನಡುವೆ ಕಲಹ ಹಿನ್ನೆಲೆಯಲ್ಲಿ ವ್ಯಕ್ತಿಯೋರ್ವನನ್ನು ಬರ್ಬರವಾಗಿ ಹತ್ಯೆಗೈದಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ರಾಯಚೂರಿನ ದೇವದುರ್ಗ ತಾಲೂಕಿನ ನಿಲವಂಜಿ ಗ್ರಾಮದ ಹತ್ತಿರ ಕೊಲೆ ನಡೆದಿದ್ದು, ಮಾರ್ಕಂಡೇಯ (28) ಕೊಲೆಯಾದ ವ್ಯಕ್ತಿ ಎಂದು ಗುರುತಿಸಲಾಗಿದೆ.
ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ಮಾರ್ಕಂಡೇಯನಿಗೆ ಹಿಂದಿನಿಂದ ಟ್ರಾಕ್ಟರ್ ಡಿಕ್ಕಿ ಹೊಡೆಸಲಾಗಿದೆ. ಪರಿಣಾಮ ವಾಹನದಿಂದ ಮಾರ್ಕಂಡೇಯ ಕೆಳಗೆ ಬಿದ್ದಿದ್ದು, ತಕ್ಷಣವೇ ಆರೋಪಿಗಳು ಕೊಡಲಿ, ಚಾಕುವಿನಿಂದ ಹತ್ಯೆ ಮಾಡಿದ್ದಾರೆ. 4ರಿಂದ 5 ಜನರಿಂದ ಈ ಕೃತ್ಯ ನಡೆದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಮಾರ್ಕಂಡೇಯ ಜೊತೆ ಈ ಹಿಂದೆ ಚುನಾವಣೆ ವಿಚಾರವಲ್ಲದೆ, ಆಗಾಗ ಸಣ್ಣಪುಟ್ಟ ಜಗಳವಾಗಿತ್ತು. ಅದು ಕೆಲ ದಿನಗಳಿಂದ ವಿಕೋಪಕ್ಕೆ ತಿರುಗಿದ್ದು, ಗುರುವಾರ ಕೊಲೆಯಲ್ಲಿ ಅಂತ್ಯಗೊಂಡಿದೆ ಎನ್ನಲಾಗುತ್ತಿದೆ. ಹತ್ಯೆಯಾದ ವ್ಯಕ್ತಿಯ ಬೈಕ್ನ ಹಿಂಬದಿ ಸವಾರನಿಗೂ ಸಣ್ಣಪುಟ್ಟ ಗಾಯಗಳಾಗಿದೆ.
ಈ ಬಗ್ಗೆ ಮೃತ ವ್ಯಕ್ತಿಯ ಸಹೋದರಿಯ ಪತಿಯು 9 ಜನರ ವಿರುದ್ಧ ಸದ್ಯ ದೂರು ನೀಡಿದ್ದಾರೆ. ಅದರ ಆಧಾರದ ಮೇಲೆ ಆರೋಪಿತರ ವಿಚಾರಣೆ ನಡೆಸಲಾಗುತ್ತಿದೆ. ಈ ಬಗ್ಗೆ ದೇವದುರ್ಗ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:ಕೊಲೆ ಮಾಡಿ ಅಪಘಾತವೆಂದು ಬಿಂಬಿಸಲು ಹೋಗಿದ್ದ ಆರೋಪಿ ಜೈಲು ಪಾಲು